ಉಪ್ಪಿನಂಗಡಿ:
ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಜೇಕಾರು ಗುಡ್ಡ ಪ್ರದೇಶದಲ್ಲಿ ಕೋಳಿ ಅಂಕ ಜೂಜು ನಡೆಯುತ್ತಿದ್ದುದನ್ನು ಪತ್ತೆಹಚ್ಚಿದ ಪೊಲೀಸರು ದಾಳಿ ನಡೆಸಿ ಒಬ್ಬನನ್ನು ಬಂಧಿಸಿ, ಕೋಳಿಗಳು, ನಗದು ಹಾಗೂ ವಾಹನಗಳನ್ನು ವಶಪಡಿಸಿಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ದಿನಾಂಕ 04-01-2026 ರಂದು ಸಂಜೆ 4.15 ಗಂಟೆ ಸುಮಾರಿಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಂಚಾರ ಉಪ-ನಿರೀಕ್ಷಕರಾದ ಸುರೇಶ ಸಿ.ಟಿ ಅವರು ಇಲಾಖಾ ಜೀಪಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಸಾರ್ವಜನಿಕ ಸರ್ಕಾರಿ ಗುಡ್ಡ ಪ್ರದೇಶದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜು ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿದೆ. ತಕ್ಷಣ ಸ್ಥಳಕ್ಕೆ ದಾಳಿ ನಡೆಸಿದಾಗ, ಜನರು ಗುಂಪಾಗಿ ಸೇರಿ ಎರಡು ಹುಂಜ ಕೋಳಿಗಳನ್ನು ಎದುರುಬದುರಾಗಿ ಹಿಡಿದುಕೊಂಡು ಕಾಲಿಗೆ ಬಾಳುಕತ್ತಿ ಕಟ್ಟಿಕೊಂಡು ಜೂಜಿನಲ್ಲಿ ತೊಡಗಿರುವುದು ಕಂಡುಬಂದಿದೆ.
ಪೊಲೀಸರ ದಾಳಿಯನ್ನು ಗಮನಿಸಿದ ಕೆಲವರು ಸ್ಥಳದಿಂದ ಪರಾರಿಯಾಗಿದ್ದು, ನೋಣಯ್ಯ ಮುಗೇರ (35), ತಂದೆ ಕುಕ್ಕ ಮುಗೇರ, ವಾಸ: ಕಲ್ಲಲಿಕೆ ಮನೆ, ಉರುವಾಲು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬಾತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಪರಾರಿಯಾದವರು ವಿಜಯ ಕಜೇಕಾರು, ರವಿ ಕಜೇಕಾರು, ಉದಯ ಪೆರಿಯಡ್ಕ ಹಾಗೂ ಇನ್ನಿಬ್ಬರು ಎಂದು ಆರೋಪಿ ತಿಳಿಸಿದ್ದಾನೆ.
ಬಂಧಿತ ಆರೋಪಿಯಿಂದ ರೂ.400 ನಗದು, ಒಂದು ಬಿಳಿ ಬಣ್ಣದ ಕೋಳಿ (ಅಂದಾಜು ಮೌಲ್ಯ ರೂ.400) ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಸ್ಥಳದಲ್ಲಿದ್ದ ಹಾಗೂ ಪರಾರಿಯಾದವರು ಬಿಟ್ಟುಹೋದ ಒಟ್ಟು ಮೂರು ಕೋಳಿಗಳು (ಅಂದಾಜು ಮೌಲ್ಯ ರೂ.1150), ಕೋಳಿ ಕಾಲಿಗೆ ಕಟ್ಟಲು ಬಳಸಿದ ಎರಡು ಬಾಳುಕತ್ತಿಗಳು ಮತ್ತು ಮೂರು ದ್ವಿಚಕ್ರ ವಾಹನಗಳನ್ನು ಪಂಚರ ಸಮಕ್ಷಮ ಮಹಜರು ಮೂಲಕ ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 04/2026 ರಂತೆ ಕೆ.ಪಿ.ಅಕ್ಟ್ ಕಲಂ 87, 93 ಹಾಗೂ ಪ್ರಾಣಿ ಹಿಂಸೆ ನಿಷೇಧ ಕಾಯ್ದೆ ಕಲಂ 3 ಮತ್ತು 11ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ.

























