ಪೊಲೀಸ್ ಠಾಣೆಯಲ್ಲಿ ಪ್ರಿಯಕರನ ಬಂಡವಾಳ ಬಯಲಾಗುತ್ತಿದ್ದಂತೆ ಆತ ಕಟ್ಟಿದ್ದ ತಾಳಿಯನ್ನೇ ಕಿತ್ತೆಸೆದು ಯುವತಿಯೋರ್ವಳು ಪೋಷಕರ ಜೊತೆಗೆ ಮರಳಿ ತೆರಳಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ಕಾರು ಅಡ್ಡಗಟಿದ್ದ ಪೋಷಕರು ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಪ್ರೇಮಿಯ ನವರಂಗಿ ಆಟಗಳೆಲ್ಲ ಆರಕ್ಷಕರ ಮುಂದೆಯೇ ಬಯಲಾಗಿದ್ದು, ಪ್ರಿಯಕರನ ನಡೆ ಕಂಡು ಯುವತಿ ಬೆಚ್ಚಿಬಿದ್ದಿದ್ದಾಳೆ. ಇವನ ಸಹವಾಸವೇ ಸಾಕು ಎಂದು ಕೈಮುಗಿದಿದ್ದಾಳೆ.
ಘಟನೆ ಏನು?
ಚಿಕ್ಕಬಳ್ಳಾಪುರ ನಗರದ ಗಂಗನಮಿದ್ದೆ ಬಡಾವಣೆಯ ನಿವಾಸಿ, ಪೇಂಟ್ ಕೆಲಸಗಾರ ಸಂದೀಪ್ ಎನ್ನುವ ವ್ಯಕ್ತಿ ಚಿಕ್ಕಬಳ್ಳಾಪುರ ನಗರದ ಕಂದವಾರ ಬಡಾವಣೆಯ ಶ್ರೀಮಂತ ಕುಟುಂಬದ 18 ವರ್ಷದ ಯುವತಿಗೆ ಗಾಳ ಹಾಕಿದ್ದ. ಆಕೆಯ ಜೊತೆ ಎರಡು ದಿನಗಳ ಹಿಂದೆ ಎಸ್ಕೇಪ್ ಆಗಿದ್ದ ಈತ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ದೇವಸ್ಥಾನವೊಂದರಲ್ಲಿ ಆಕೆಗೆ ತಾಳಿಯನ್ನೂ ಕಟ್ಟಿದ್ದ.
ಬಳಿಕ ಈ ಜೋಡಿ ಕಾರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾಗ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ಯುತಿಯ ಪೋಷಕರು ಇವರ ಕಾರನ್ನು ಅಡ್ಡಗಟ್ಟಿದ್ದರು. ಮಹಿಳಾ ಠಾಣೆಗೆ ಮಗಳು ಮತ್ತು ಆಕೆಯ ಪ್ರಿಯಕರನನ್ನು ನೇರವಾಗಿ ಕರೆದುಕೊಂಡು ಬಂದಿದ್ದರು. ತಾವು ಮದುವೆ ಮಾಡಿಕೊಂಡಿದ್ದು ತಮ್ಮ ಪಾಡಿಗೆ ತಮ್ಮನ್ನು ಬಿಡುವಂತೆ ಈ ವೇಳೆ ಜೋಡಿ ಪೊಲೀಸರನ್ನು ಕೇಳಿಕೊಂಡಿತ್ತು. ಅಷ್ಟರಲ್ಲಿ ಸಂದೀಪ್ನ ಒಂದೊಂದೇ ಪ್ರೇಮ ಪ್ರಕರಣಗಳು ಬಯಲಾಗಿವೆ.
20024ರಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ನಾಯನಹಳ್ಳಿ ಗ್ರಾಮದ ಅಪ್ರಾಪ್ರ ಬಾಲಕಿಯನ್ನು ಪ್ರೀತಿಸಿದ್ದ ಸಂದೀಪ್ ಆಕೆಯನ್ನು ಮದುವೆ ಮಾಡಿಕೊಂಡಿದ್ದ. ಪ್ರಶಾಂತ್ ನಗರದಲ್ಲಿ ಮತ್ತೊರ್ವ ಮಹಿಳೆಯಗೆ ವಂಚನೆ ಮಾಡಿದ್ದು, ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪೋಕ್ಸೋ ಪ್ರಕರಣ ಕೂಡ ದಾಖಲಾಗಿರೋದು ಗೊತ್ತಾಗಿದೆ. ಇವುಗಳ ಜೊತೆಗೆ ಸಾಕ್ಷಿ ಎಂಬಂತೆ ಸಂದೀಪ್ನಿಂದ ಹಿಂದೆ ಮೋಸ ಹೋಗಿರುವ ಅಪ್ರಾಪ್ತೆಯೇ ಠಾಣೆಗೆ ಬಂದು ಆತನ ಇತಿಹಾಸ ಬಿಚ್ಚಿಟ್ಟಿದ್ದಾಳೆ. ಹೀಗಾಗಿ ಪ್ರಿಯಕರ ಕಟ್ಟಿದ್ದ ತಾಳಿಯನ್ನು ಕಿತ್ತು ಬಿಸಾಕಿ ಆತನಿಗೆ ಗುಡ್ ಬೈ ಹೇಳಿ ಯುವತಿ ತಂದೆ-ತಾಯಿ ಜೊತೆ ಮನೆಗೆ ಹೋದ ಪ್ರಸಂಗ ನಡೆದಿದೆ.


























