ಉಪ್ಪಿನಂಗಡಿ : ಕಳೆದ ನವೆಂಬರ್ 8 ರಂದು ಉಪ್ಪಿನಂಗಡಿಯ ಜ್ಯೂಸ್ ಸೆಂಟರ್ ವೊಂದಕ್ಕೆ ನುಗ್ಗಿ ಅಲ್ಲಿನ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ಆದೇಶದನ್ವಯ 5 ಮಂದಿ ಆರೋಪಿಗಳ ವಿರುದ್ದ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಪ್ಪಿನಂಗಡಿಯ ಪೆರಿಯಡ್ಕ ಮನೆ ನಿವಾಸಿ ಮಹಮ್ಮದ್ ಎಂಬವರ ಮಗನಾದ ನೌಫ್ ದೂರುದಾರರಾಗಿದ್ದು, ‘ನವೆಂಬರ್ 8 ರಂದು ಉಪ್ಪಿನಂಗಡಿಯ ಹಳೇ ಬಸ್ ನಿಲ್ದಾಣದ ಬಳಿಯ ಕಾಮತ್ ಜ್ಯೂಸ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅಲ್ಲಿಗೆ ಬಂದಿದ್ದ ತಾಹಿರಾ ಮತ್ತು ತಸ್ಮಿಯಾ ಎಂಬಿಬ್ಬರು, ಪೆರಿಯಡ್ಕದಲ್ಲಿ ನಡೆದಿದೆ ಎನ್ನಲಾದ ಘಟನೆಯನ್ನು ಉಲ್ಲೇಖಿಸಿ ಕೈಯಿಂದ ಹೊಡೆದು, ಜೀವ ಬೆದರಿಕೆಯೊಡ್ಡಿದ್ದಾರೆ.
ಜ್ಯೂಸ್ ಸೆಂಟರ್ ಹೊರಗಡೆ ನಿಂತಿದ್ದ ಯಾಹ್ಯಾ, ಸಿರಾಜ್, ಖಾದರ್ ಆದರ್ಶನಗರ ಎಂಬವರು ಜೀವ ಬೆದರಿಕೆಯೊಡ್ಡಿರುತ್ತಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.
ಘಟನೆಗೆ ಸಂಬಂಧಿಸಿ ಪೊಲೀಸ್ ಇಲಾಖೆಯಲ್ಲಿ ದೂರು ದಾಖಲಾಗದೇ ಇದ್ದ ಕಾರಣ ಹಲ್ಲೆಗೀಡಾದ ನೌಫ್ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯದ ನಿರ್ದೇಶನದಂತೆ ಇದೀಗ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲುಗೊಂಡಿದೆ.


























