ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ದುಲ್ ಖಾದರ್ @ ಶೌಕತ್ (ನಿವಾಸಿ: ವಿಟ್ಲ ಕಸಬ ಗ್ರಾಮ, ಬಂಟ್ವಾಳ ತಾಲೂಕು) ಎಂಬಾತನ ವಿರುದ್ಧ ಹಲ್ಲೆ, ದೊಂಬಿ ಹಾಗೂ ನಿಷೇಧಿತ ಮಾದಕ ದ್ರವ್ಯ ಸೇವನೆ ಸೇರಿದಂತೆ ಎನ್‌ಡಿಪಿಎಸ್ ಕಾಯ್ದೆಯಡಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿದ್ದವು.
ಆರೋಪಿಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ವರದಿಯ ಆಧಾರದಲ್ಲಿ ಸಹಾಯಕ ಆಯುಕ್ತರು ಹಾಗೂ ಉಪವಿಭಾಗಿಯ ದಂಡಾಧಿಕಾರಿ, ಮಂಗಳೂರು ಅವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡುವ ಆದೇಶ ಹೊರಡಿಸಿದ್ದರು.
ಸದರೀ ಆದೇಶದಂತೆ ದಿನಾಂಕ 08-01-2026 ರಂದು ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣೆಗೆ ವಿಟ್ಲ ಪೊಲೀಸರು ಸುರಕ್ಷಿತವಾಗಿ ಕಳುಹಿಸಿದ್ದಾರೆ.
ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ.


























