ಬೆಳ್ತಂಗಡಿ : ಬಸ್ಸಿನಲ್ಲಿ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ
ನಾವೂರು ಗ್ರಾಮದ ಮಹಿಳೆ ಮತ್ತು ಅವರಿಬ್ಬರು ಮಕ್ಕಳಿಗೆ ಅಪರಿಚಿತ ಯುವಕರಿಬ್ಬರು ಹಲ್ಲೆ ನಡೆಸಿದ ಘಟನೆ ಜ.10 ರಂದು ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ನಿರಿಂದಿ ನಿವಾಸಿ ರಝಾಕ್ ಅವರ ಪತ್ನಿ ಆಸೀದಾ(38), ಪುತ್ರರಾದ ಮುಝಫರ್(20) ಮತ್ತು ಮುರ್ಷಿದ್(19) ಹಲ್ಲೆಗೊಳಗಾದವರು. ಈ ಪೈಕಿ ಮುಝಪರ್ ಅವರಿಗೆ ತಲೆಗೆ ಹೆಚ್ಚಿನ ಗಾಯವಾಗಿದೆ. ಅವರ ಜೊತೆಗೆ ಎಳೆಯ ಪ್ರಾಯದ ಇಬ್ಬರು ಮಕ್ಕಳೂ ಕೂಡ ಇದ್ದರು. ಅವರು ಈ ಘಟನೆ ನೋಡಿ ಭಯಭೀತರಾಗಿದ್ದರು.
ಘಟನೆ ವಿವರ..!!
ಮಂಗಳೂರಿನ ಉಚ್ಚಿಲ ಎಂಬಲ್ಲಿ ರವಿವಾರ ನಡೆಯಬೇಕಿದ್ದ ಕುಟುಂಬದ ಕಾರ್ಯಕ್ರಮಕ್ಕೆ ಹೋಗುವ ಉದ್ದೇಶದಿಂದ ಬೆಂಗಳೂರಿನಲ್ಲಿ ಮೊಬೈಲ್ ಅಂಗಡಿ ಹೊಂದಿರುವ ಮುಝಪರ್ ಅವರು ಕಳೆದ ಜ.9 ರಂದು ನಾವೂರು ಮನೆಗೆ ಆಗಮಿಸಿ ಜ.10 ರಂದು 3 ಗಂಟೆಗೆ ತಾಯಿ ಸಹೋದರ ಸಹಿತ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಂಗಳೂರಿಗ ಪ್ರಯಾಣ ಹೊರಟಿದ್ದರು. ಇವರ ಜೊತೆ ಜೊತೆಗೆ ಬೆಳ್ತಂಗಡಿಯಲ್ಲಿ ಬಸ್ಸೇರಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಯಾವುದೋ ಅಮಲು ಸೇವಿಸಿದ್ದವರ ರೀತಿ ಕಾಣುತ್ತಿದ್ದವರು ಮಹಿಳೆಯರೂ ಇದ್ದ ಬಸ್ಸಿನಲ್ಲಿ ಜೋರಾದ ಶಬ್ದದಲ್ಲಿ ಕೆಟ್ಟ ಭಾಷೆಯಲ್ಲಿ ಮಾತನಾಡುತ್ತಿದ್ದರು. ಇದು ಇತರ ಪ್ರಯಾಣಿಕರಿಗೆ ಮತ್ತು ಮಹಿಳೆಯರಿಗೆ ಮುಜುಗರದ ಸನ್ನಿವೇಶ ನಿರ್ಮಿಸಿತ್ತು. ಅವರ ಈ ವರ್ತನೆಯನ್ನು ಕಂಡು ಮುಝಫರ್ ಸಾರ್ವಜನಿಕವಾಗಿ ನೀವು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಇಬ್ಬರು ಯುವಕರಿಗೆ ತಿಳಿಸಿದನ್ನೇ ನೆಪವಾಗಿಟ್ಟುಕೊಂಡು ಅಪರಿಚಿತರು ಇವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಆರಂಭದಲ್ಲಿ ಜಗಳ ಶುರು ಮಾಡಿದ ಯುವಕರ ವರ್ತನೆಯಿಂದ ಮುಝಫರ್ ಅವರ ತಾಯಿ ಕಂಡೆಕ್ಟರ್ ಬಳಿ ಬಸ್ಸು ನಿಲ್ಲಿಸುವಂತೆ ಕೇಳಿಕೊಂಡರು.ಮದ್ದಡ್ಕ ಬಸ್ ನಿಲ್ದಾಣದ ಎದುರು ಹೋಗಿ ಚಾಲಕ ಬಸ್ಸು ನಿಲ್ಲಿಸಿದರು. ಈ ವೇಳೆ ಮುಝಪರ್ ಅವರ ತಾಯಿಯನ್ನು ದೂಡಿ, ಸಹೋದರರು ಇಬ್ಬರಿಗೂ ಹಲ್ಲೆ ನಡೆಸಿ ಇಬ್ಬರೂ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯಿಂದ ಗಾಯಗೊಂಡ ಆಸೀದಾ(38), ಪುತ್ರರಾದ ಮುಝಫರ್(20) ಮತ್ತು ಮುರ್ಷಿದ್(19) ಮೂವರು ಗುರುವಾಯನಕರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಗೆ ಗಾಯಗೊಂಡ ಮುರುಫರ್ ದೂರಿನ ಮೇರೆಗೆ ಜ.10 ರಂದು 74 115(2) 118(2) 352 r/w 3(5) BNS ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆ.


























