ಪುತ್ತೂರು: ಹೆರಿಗೆ ಸಮಯ ಮಗು ಮೃತಪಟ್ಟ ಕುರಿತು ಸಂಶಯದ ಹಿನ್ನೆಲೆಯಲ್ಲಿ ದೂರುದಾರರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ದೇರಳಕಟ್ಟೆ ಆಸ್ಪತ್ರೆ ಗೆ ಕೊಂಡೊಯ್ಯಲಾಗಿದೆ.
ಬೆಳ್ಳಾರೆ ಗ್ರಾಮದ ಮಿಲನ್ ಎಂಬವರ ಪತ್ನಿ ಚೈತ್ರ ಅವರು ಮೊದಲನೆ ಮಗುವಿನ ಗರ್ಭಿಣಿಯಾಗಿದ್ದು, ಪುತ್ತೂರು ಸಿಟಿ ಆಸ್ಪತ್ರೆಯ ಹೆರಿಗೆ ತಜ್ಞೆ ಡಾ. ಶೃತಿ ಎಂಬವರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ವೈದ್ಯರು ಜ.15ರಂದು ಹೆರಿಗೆ ದಿನಾಂಕ ನಿಗದಿಪಡಿಸಿದ್ದರು. ಆದರೆ ಜ.13ಕ್ಕೆ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದು, ಅದರಂತೆ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾಗಿದ್ದ ಅವರನ್ನು ವೈದ್ಯರು ಪರೀಕ್ಷಿಸಿ ಎಲ್ಲಾ ನಾರ್ಮಲ್ ಆಗಿದೆ ಎಂದು ಹೇಳಿ ಹೆರಿಗೆ ನೋವಿಗಾಗಿ ಚುಚ್ಚುಮದ್ದು ನೀಡಿದ್ದರು. ಬಳಿಕ ನೋವು ಕಾಣಿಸಿದ್ದರಿಂದ ಹೆರಿಗೆ ಕೋಣೆಗೆ ಕರೆದುಕೊಂಡು ಹೋಗಿದ್ದರು.
ಸಂಜೆ ವೇಳೆ ವೈದ್ಯರು ನನ್ನನ್ನು ಹೆರಿಗೆ ಕೋಣೆಯ ಬಳಿಗೆ ಕರೆದು ನನ್ನಲ್ಲಿ ನಿಮ್ಮ ಪತ್ನಿಗೆ ನಾವು ನಾರ್ಮಲ್ ಹೆರಿಗೆಗಾಗಿ ಪ್ರಯತ್ನಿಸಿದ್ದು, ನಾರ್ಮಲ್ ಹೆರಿಗೆ ಆಗದೇ ಇದ್ದಾಗ ಸಿಸೇರಿಯನ್ ಮೂಲಕ ಮಗುವನ್ನು ಹೊರಗೆ ತೆಗೆದಿರುತ್ತೇವೆ.
ಆದರೆ ಮಗು ಸಿಸೇರಿಯನ್ ಮಾಡಿಸಿ ಹೊರಗೆ ತೆಗೆಯುವಾಗಲೇ ಮೃತಪಟ್ಟಿದೆ ಎಂದು ತಿಳಿಸಿದ್ದರು. ಈ ಕುರಿತು ಪತ್ನಿಯ ಹೆರಿಗೆಯ ಸಮಯದಲ್ಲಿ ಮಗು ಮೃತಪಟ್ಟಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಚೈತ್ರ ಅವರ ಗಂಡ ಮಿಲನ್‌ರವರು ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ರವಾನಿಸಿದ್ದು, ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ಬರಬೇಕಾಗಿದೆ.
ಆಸ್ಪತ್ರೆಯಿಂದ ಸ್ಪಷ್ಟನೆ: ಮಗುವನ್ನು ನಾರ್ಮಲ್ ಡೆಲಿವರಿಗೆ ಟೈ ಮಾಡಿದ್ದು. ಆಗ ಗರ್ಭದಿಂದ ನೀರು ಹೊರಗೆ ಬಂದು ಅದರೊಂದಿಗೆ ಕರುಳು ಬಳ್ಳಿಯೂ ಹೊರಗೆ ಬಂದು ತುರ್ತು ಸಂದರ್ಭ ಎದುರಾಯಿತು. ಆ ಸಮಯದಲ್ಲಿ ಅವರನ್ನು ಬೇರೆ ಕಡೆಗೆ ಹೋಗಿ ಅಥವಾ ಮಂಗಳೂರಿಗೆ ಹೋಗಿ ಎಂದು ಹೇಳುವಂತಹ ಪರಿಸ್ಥಿತಿ ಇಲ್ಲ.
ಸಿಸೇರಿಯನ್ ಮಾಡುವಾಗ ಕೂಡಾ ಅರಿವಳಿಕೆ ತಜ್ಞರು, ಮಕ್ಕಳ ತಜ್ಞರು ಜೊತೆಗಿದ್ದರು. ಮಗುವನ್ನು ಹೊರ ತೆಗೆದು ತಕ್ಷಣ ಮಗುವನ್ನು ಅವರಿಗೆ ನೀಡಿದೆ. ಅವರು ಸುಮಾರು 20 ನಿಮಿಷ ಮಗುವನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ.
ಈ ಕುರಿತು ಹೆರಿಗೆಗೆ ಬಂದವರ ಕಡೆಯವರು ನಮಗೆ ಸಿಕ್ಕಾಪಟ್ಟೆ ಬೈದಿದ್ದಾರೆ. ನೀವು ಬೇರೆ ಕಡೆ ಕಳುಹಿಸಬೇಕಿತ್ತು ಅನ್ನುವುದು ಅವರ ವಾದ. ಆದರೆ ತುರ್ತು ಸಿಸೇರಿಯನ್ ಮಾಡಬೇಕಾದಸಮಯದಲ್ಲಿ ನೀವು ಮಂಗಳೂರಿಗೆ ಹೋಗಿ ಅಥವಾ ಬೇರೆ ಕಡೆ ಹೋಗಿ ಎಂದು ಕಳುಹಿಸುವುದು ತಪ್ಪು.
ಸಿಸೇರಿಯನ್ ಎಂಬುದು ಎಲ್ಲಾ ಆಸ್ಪತ್ರೆಯಲ್ಲೂ ಆಗುವಂತಹ ವಿಚಾರ, ಹಾಗಾಗಿ ಎಷ್ಟು ಬೇಗವೋ ಅಷ್ಟು ಬೇಗ ಸಿಸೇರಿಯನ್ ಮಾಡಿದಾಗ ಮಗು ಉಳಿಯುವ ಚಾನ್ಸ್ ಇರುತ್ತದೆ. ಅದು ಬಿಟ್ಟು ಮಂಗಳೂರಿಗೆ ಹೋಗಿ ಎಂದು ಹೇಳಿದರೆ ಸಮಯ ವ್ಯರ್ಥ ಹೊರತು ಮಗು ಉಳಿಯವ ಚಾನ್ಸ್ ಕೂಡಾ ಕಡಿಮೆ.
ಆಗ ಆಪಾದನೆ ನಮ್ಮ ಮೇಲೆಯೇ ಬರುತ್ತದೆ. ಹಾಗಾಗಿ ಇಲ್ಲಿ ನಾವು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಸಮಯದಲ್ಲಿ ಸಿಸೇರಿಯನ್ ಮಾಡಿ ಮಗು ಉಳಿಸುವ ಪ್ರಯತ್ನ ಮಾಡಿದ್ದೇವೆ. ಸಾಮಾನ್ಯವಾಗಿ ಮಗುವಿನ ಜನನದ ವೇಳೆ ತಲೆ ಮೊದಲು ಬರುವುದು. ದೇಹ ಬರುವಾಗ ಅದರೊಂದಿಗೆ ಕರುಳುಬಳ್ಳಿ ಬರುವುದು. ಆದರೆ ಇಲ್ಲಿ ಕ್ರಿಸ್ಟೋ ಗರ್ಭದಲ್ಲಿ ನೀರು ಲೀಕ್ ಆಗಿ ಅದು ಹೊರಗೆ ಬರುವಾಗ ಅದರೊಂದಿಗೆ ಬಳ್ಳಿಯೂ ಬಂದಿದೆ. ಅದು ಅಪರೂಪದ ಸಂಗತಿಯೂ ಅಲ್ಲ. ನಮ್ಮ ವೈದ್ಯಕೀಯ ಪುಸ್ತಕದಲ್ಲೂ ಇದ್ದಂತೆ ಇಂತಹ ಸಂದರ್ಭದಲ್ಲಿ ಆದಷ್ಟು ಬೇಗ ಸಿಸೇರಿಯನ್ ಮಾಡಬೇಕು.
ಅದಕ್ಕೆ ಸರಿಯಾಗಿ ಅರಿವಳಿಕೆ ತಜ್ಞರು, ಮಕ್ಕಳ ವೈದ್ಯರು ಜೊತೆಯಲ್ಲೇ ಇದ್ದರು. ಯಾವ ಸಮಯವನ್ನೂ ವ್ಯರ್ಥ ಮಾಡದೆ ಮಗುವನ್ನು ಉಳಿಸುವ ಪ್ರಯತ್ನ ಮಾಡಲಾಗಿದೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಭಾಸ್ಕರ್ ಎಸ್. ತಿಳಿಸಿದ್ದಾರೆ.


























