ಬೆಳ್ತಂಗಡಿ: ದಿನಾಂಕ 14-01-2026 ರಂದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಒಡಿಲ್ನಾಳ ಗ್ರಾಮದ ಸಂಬೋಳ್ಯ ಪ್ರದೇಶದಲ್ಲಿ ನಡೆದ 15 ವರ್ಷದ ಸುಮಂತ್ ಅವರ ಅಸಹಜ ಸಾವಿನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಶವಪರೀಕ್ಷೆಯ ನಂತರ ಲಭ್ಯವಾದ ಪ್ರಾಥಮಿಕ ವರದಿಯ ಆಧಾರದ ಮೇಲೆ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ ತನಿಖೆ ಕೈಗೊಳ್ಳಲಾಗಿದೆ.
ಶವಪರೀಕ್ಷಾ ವರದಿಯ ಪ್ರಕಾರ, ಸುಮಂತ್ ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತನಾಗಿದ್ದನು ಹಾಗೂ ತಕ್ಷಣದ ಸಾವಿನ ಕಾರಣ ಮುಳುಗು ಸಾವಾಗಿರುತ್ತದೆ ಎಂದು ತಿಳಿಸಿದೆ. ತಲೆಯ ಮೇಲಿನ ಗಾಯಗಳು ಮಂದ ಬಲದ ಗಾಯಗಳು (Blunt injury) ಆಗಿದ್ದು, ಯಾವುದೇ ಚೂಪಾದ ಆಯುಧಗಳಿಂದ ಆಗಿರುವ ಗಾಯಗಳಲ್ಲ ಎಂಬುದು ವರದಿಯಲ್ಲಿ ಸ್ಪಷ್ಟವಾಗಿದೆ.
ಆದರೆ ತಲೆಯ ಮೇಲಿನ ಗಾಯಗಳು ಹೇಗೆ ಉಂಟಾದವು ಎಂಬ ಬಗ್ಗೆ ಸಮರ್ಪಕ ಮತ್ತು ಸ್ಪಷ್ಟ ವಿವರಣೆ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ಸುತ್ತಮುತ್ತ ಹಲವು ಅನುಮಾನಗಳು ಮೂಡಿದ್ದು, ಸಂಪೂರ್ಣ ಹಾಗೂ ಸೂಕ್ಷ್ಮ ತನಿಖೆ ಅಗತ್ಯವೆಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
ಅದರಿಂದ ಈ ಅಸಹಜ ಸಾವು ಪ್ರಕರಣವನ್ನು ಕೊಲೆ ಪ್ರಕರಣವಾಗಿ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಸಮಗ್ರ ತನಿಖೆಗಾಗಿ ಬೆಳ್ತಂಗಡಿ ಉಪ ಪೊಲೀಸ್ ಅಧೀಕ್ಷಕರು (ಡಿಎಸ್‌ಪಿ) ಅವರ ನೇತೃತ್ವದಲ್ಲಿ ನಾಲ್ಕು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ.
ತನಿಖೆ ಪ್ರಗತಿಯಲ್ಲಿದ್ದು, ಸತ್ಯಾಸತ್ಯತೆ ಹೊರಬರಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.


























