ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕರಾಯ ಎಂಬಲ್ಲಿ ಮಾದಕ ದ್ರವ್ಯ ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದ ಆರೋಪದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕ ವ್ಯಸನಿಗಳಿಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.
ಕರಾಯ ಗ್ರಾಮದ ಮುಗ್ಗಕೋಡಿ ಮನೆ ನಿವಾಸಿ ದಿ. ಅಬೂಬಕ್ಕರ್ ಎಂಬವರ ಮಗ ಎಂ. ಮಹಮ್ಮದ್ ಮುಸ್ತಾರ್ (32) ಎಂಬಾತ ಕರಾಯ ಪೇಟೆಯಲ್ಲಿ ಅನುಚಿತವಾಗಿ ವರ್ತನೆ ತೋರುತ್ತಿದ್ದದ್ದನ್ನು ಗಮನಿಸಿದ ಗಸ್ತು ನಿರತ ಟ್ರಾಫಿಕ್ ಎಸೈ ಸುರೇಶ್ ವಿಚಾರಣೆ ನಡೆಸಿದಾಗ ಮಾದಕ ದ್ರವ್ಯವನ್ನು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತನನ್ನು ವೈದ್ಯಕೀಯ ಪರಿಕ್ಷೆಗೆ ಒಳಪಡಿಸಿದಾಗ ಮಾದಕ ದ್ರವ್ಯ ಸೇವನೆಯು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಕರಾಯ ಗ್ರಾಮದ ಕರಾಯ ಜನತಾ ಕಾಲನಿ ನಿವಾಸಿ ಕೆ. ಸೈಯ್ಯದ್ ನಿಜಾಮುದ್ದೀನ್ (30) ಎಂಬಾತ ಮಾದಕ ದ್ರವ್ಯ ಸೇವಿಸಿ ಕರಾಯ ಪೇಟೆಯಲ್ಲಿ ಅನುಚಿತವಾಗಿ ವರ್ತನೆ ತೋರಿದ್ದನ್ನು ಪತ್ತೆ ಹಚ್ಚಿದ ಟ್ರಾಫಿಕ್ ಎಸೈ ಸುರೇಶ್ ಆತನನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಮಾದಕ ದ್ರವ್ಯ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

























