ಪುತ್ತೂರು: ನೆಲ್ಲಿಕಟ್ಟೆಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿತ್ತೆನ್ನಲಾದ ಮನೆಯೊಂದನ್ನು ಹಾಡಹಗಲೇ ಧ್ವಂಸ ಮಾಡಲಾದ ಘಟನೆ ಜ.23ರಂದು ನಡೆದಿದೆ.
ಮೂಲಗೇಣಿಯಲ್ಲಿರುವ ಪ್ಯಾಟ್ರಿಕ್ ಸಿಪ್ರಿಯನ್ ಎಂಬವರ ಮನೆ ಇದಾಗಿದೆ. ತಾನು ಮನೆಯಲ್ಲಿ ಇಲ್ಲದ ವೇಳೆ ಯಾರೋ ತನ್ನ ಮನೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿರುವ ಪ್ಯಾಟ್ರಿಕ್ ಸಿಪ್ರಿಯನ್, ಈ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.
ಮನೆಯನ್ನು ತೆರವು ಮಾಡಿದವರು ಮನೆಯೊಳಗಿದ್ದಫ್ರಿಡ್ಜ್, ಟಿವಿ, ವಾಷಿಂಗ್ ಮೆಷಿನ್, ಮಿಕ್ಸರ್ ಡ್ರೈಂಡರ್, ಗೋದ್ರೇಜ್ ಕಪಾಟುಗಳು ಸಹಿತ ಹಲವು ಉಪಕರಣಗಳು, ಇನ್ನಿತರ ಸಾಮಾಗ್ರಿಗಳನ್ನು ಹೊರಗಡೆ ಜೋಡಿಸಿ ಇಟ್ಟು ಮತ್ತೆ ಮನೆ ಧ್ವಂಸಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಯಾರು ಮನೆ ಧ್ವಂಸ ಮಾಡಿರುವುದು ಎನ್ನುವುದು ನಿಗೂಢವಾಗಿದೆ.
ನೆಲ್ಲಿಕಟ್ಟೆ ಸುತ್ತಮುತ್ತ ದೇವಸ್ಥಾನದ ಜಾಗ ಇದೆ.ಅಲ್ಲಿ ಮನೆ ತೆರವಾದ ವಿಚಾರ ತಿಳಿದಿದೆ ಹೊರತು ನಮಗೆ ಬೇರೆ ಯಾವ ಮಾಹಿತಿಯಿಲ್ಲ ಎಂದು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ತಿಳಿಸಿದ್ದಾರೆ.


























