ವಿಟ್ಲ: ದಿನಾಂಕ 25.01.2026 ರಂದು ಮಧ್ಯಾಹ್ನ 1.20 ಗಂಟೆಗೆ ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷಕ ರಾಮಕೃಷ್ಣ ಅವರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ವಿಟ್ಲ ಮುಡ್ನೂರು ಗ್ರಾಮದ ಎಲ್ಯಣ್ಣ ಪೂಜಾರಿಯವರ ತೋಟದ ಬಳಿ ಕೋಳಿ ಅಂಕ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತು.
ತಕ್ಷಣವೇ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು, ಮಧ್ಯಾಹ್ನ ಸುಮಾರು 2.00 ಗಂಟೆಗೆ ಕೋಳಿ ಅಂಕ ಜೂಜಾಟ ನಡೆಯುತ್ತಿರುವುದನ್ನು ಪತ್ತೆಹಚ್ಚಿದರು. ಪೊಲೀಸರನ್ನು ಕಂಡು ಕೆಲವರು ಪರಾರಿಯಾಗಿದ್ದು, ಮಹೇಶ್, ಬಾಬು, ಆನಂದ ಹಾಗೂ ಅಣ್ಣು ಎಂಬ ನಾಲ್ವರನ್ನು ಸ್ಥಳದಲ್ಲೇ ಬಂಧಿಸಲಾಯಿತು.
ದಾಳಿಯ ವೇಳೆ ಸ್ಥಳದಿಂದ ರೂ. 4,390 ನಗದು ಹಣ, 8 ಹುಂಜಗಳು (ಅಂದಾಜು ಮೌಲ್ಯ ರೂ. 4,550) ಹಾಗೂ 10 ಕೋಳಿ ಬಾಳುಗಳು (ಅಂದಾಜು ಮೌಲ್ಯ ರೂ. 500) ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಪಂಚರ ಸಮಕ್ಷಮ ಮಹಜರ್ ಮೂಲಕ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 15/2026ರಂತೆ ಕೆ.ಪಿ. ಆಕ್ಟ್ ಸೆಕ್ಷನ್ 87, 93 ಹಾಗೂ ಕ್ರೂರತೆ ತಡೆ ಕಾಯ್ದೆ 3, 11ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
























