ಉಪ್ಪಿನಂಗಡಿ: ರಸ್ತೆ ಬದಿಯ ಚರಂಡಿ ಮೋರಿಗೆ ಡಿಕ್ಕಿಯಾದ ಕಾರೊಂದು ಬೆಂಕಿ ಹತ್ತಿಕೊಂಡು ಉರಿದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಕಾಂಚನ ಕ್ರಾಸ್ ಬಳಿ ಜ.30ರಂದು ನಡೆದಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು, ಹಳೆಯ ಹೆದ್ದಾರಿಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಅದರ ಬದಿಯಲ್ಲಿ ಹೊಸ ಹೆದ್ದಾರಿ ನಿರ್ಮಾಣದ ಕಾಮಗಾರಿ ನಡೆಯುತ್ತಿತ್ತು.
ಹಾಸನ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರು (ಕೆಎ05 ಎನ್ಎನ್ 8222) ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಸಾಗಿ ಹೊಸ ಹೆದ್ದಾರಿ ನಿರ್ಮಾಣದ ಸಂದರ್ಭ ಚರಂಡಿಗೆ ಅಳವಡಿಸಿದ್ದ ಮೋರಿಗೆ ಢಿಕ್ಕಿಯಾಗಿದೆ.
ಈ ಸಂದರ್ಭ ಕಾರಿನ ಎಂಜಿನ್ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಹೊತ್ತಿ ಉರಿಯತೊಡಗಿತು. ಕಾರಿನಲ್ಲಿ ಒಬ್ಬ ಯುವಕ ಹಾಗೂ ಓರ್ವ ಯುವತಿಯಿದ್ದು ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಕೊನೆಗೆ ಪುತ್ತೂರಿನಿಂದ ಅಗ್ನಿಶಾಮಕ ವಾಹನ ಬಂದು ಬೆಂಕಿಯನ್ನು ನಂದಿಸಿತ್ತಾದರೂ, ಅಷ್ಟರಲ್ಲಾಗಲೇ ಕಾರು ಸಂಪೂರ್ಣ ಉರಿದು ಹೋಗಿದ್ದು, ಇದರ ಮೆಟಲ್ ಬಾಡಿ ಹಾಗೂ ಕಬ್ಬಿಣದ ವಸ್ತುಗಳಷ್ಟೇ ಉಳಿದಿದೆ. ಕಾರಿನಲ್ಲಿದ್ದವರ ವಿವರ ಬೆಳಕಿಗೆ ಬಂದಿಲ್ಲ.
ಈವರೆಗೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.


























