ಪುತ್ತೂರು: ಪೋಕ್ಸೋ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಪೋಕ್ಸೋ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪು ವಿರುದ್ಧ ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ಶಿಕ್ಷೆಯ ತೀರ್ಪು ಆಮಾನಾತಿನಲ್ಲಿರಿಸಿ ಜಾಮೀನು ಮಂಜೂರು ಮಾಡಿದೆ.
ಎಲಿಯಾಸ್ ಪಿಂಟೋ ಅವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜ್ ನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಸಂದರ್ಭ ಅದೇ ಕಾಲೇಜಿನ ಅಪ್ರಾಪ್ತ ಬಾಲಕಿಗೆ 2021ರ ಅ.23ರಂದು ಸ್ಪೋಟ್ ಪ್ರಾಕ್ಟಿಸ್ ಸಂದರ್ಭ ಲೈಂಗಿಕ ಕಿರುಕುಳ ನೀಡಿರುವುದಾಗಿ ಬಾಲಕಿ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ದ.ಕ. ಮಹಿಳಾ ಪೊಲೀಸ್ ಠಾಣೆಯ ಆಗಿನ ಪೊಲೀಸ್ ನಿರೀಕ್ಷಕ ತಿಮ್ಮಪ್ಪನಾಯ್ಕ ಅವರು ಆರೋಪಿ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಸಲ್ಲಿಸಿದ್ದರು.
ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಸಾಕ್ಷಿಗಳ ವಿಚಾರಣೆ ನಡೆಸಿ ಆರೋಪ
ಸಾಬೀತಾದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆ ಕಲಂ 10 ರಡಿ ಅಪರಾಧಕ್ಕೆ 5 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ.20ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 6 ತಿಂಗಳ ಸಾದಾ ಶಿಕ್ಷೆ. ಭಾ.ದಂ.ಸಂ. ಕಲಂ 354(ಎ) ರಡಿ ಅಪರಾಧಕ್ಕೆ 3 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ.10ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಶಿಕ್ಷೆ ವಿಧಿಸಿದ್ದರು.
ದಂಡದ ಮೊತ್ತದಲ್ಲಿ ರೂ. 20ಸಾವಿರವನ್ನು ನೊಂದ ಬಾಲಕಿಗೆ ನೀಡಲು ಆದೇಶಿಸಿದ್ದರು.
ಆದರೆ ಈ ಕುರಿತು ಆರೋಪಿ ಎಲಿಯಾಸ್ ಪಿಂಟೋ ಅವರು ತಮ್ಮ ವಕೀಲರ ಮೂಲಕ ಹೈಕೋರ್ಟ್‌ಗೆ ಮೇಲ್ಮನವಿ ಅಪೀಲು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿ ಅಪೀಲು ತೀರ್ಮಾನ ಆಗುವ ತನಕ ಶಿಕ್ಷೆಯನ್ನು ಆಮಾನತಿನಲ್ಲಿಟ್ಟು ಆರೋಪಿಗೆ ಜಾಮೀನು ಮಂಜೂರು ಮಾಡಿದೆ.

























