ಪುತ್ತೂರು: ದಿನಾಂಕ 19-01-2026 ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ 1 ಕ್ವಿಂಟಾಲ್ 6 ಕೆ.ಜಿ 50 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು, ಗಾಂಜಾ ಪೂರೈಕೆ ಜಾಲದ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳಿಗೆ ಹಣ ಹಾಗೂ ವಾಹನದ ವ್ಯವಸ್ಥೆ ಮಾಡಿಕೊಟ್ಟ ಆರೋಪದ ಮೇಲೆ ಬೆಳ್ತಂಗಡಿ ಚಾರ್ಮಾಡಿ ನಿವಾಸಿ ಮಹಮ್ಮದ್ ಫಯಾಜ್ ಡಿ.ಕೆ (27) ಹಾಗೂ ಬೆಳ್ತಂಗಡಿ ಕಕ್ಕಿಂಜೆ ನಿವಾಸಿ ನಝಿರ್ (42) ಅವರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಇನ್ನೂ, ಆರೋಪಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಒರಿಸ್ಸಾ ರಾಜ್ಯದ ದೀಪಕ್ ಪಾತ್ರ (37) ಎಂಬಾತನನ್ನು ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಮೋದ್ ಕುಮಾರ್ ಅವರ ನೇತೃತ್ವದಲ್ಲಿ ತನಿಖಾ ತಂಡವು ಒರಿಸ್ಸಾ ರಾಜ್ಯಕ್ಕೆ ತೆರಳಿ ಬಂಧಿಸಿದೆ. ಈ ವೇಳೆ ಆರೋಪಿಯಿಂದ ರೂ.80,000/- ಮೌಲ್ಯದ 1 ಕೆ.ಜಿ 788 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣದಲ್ಲಿ ಮೊದಲಿಗೆ ವಶಪಡಿಸಿಕೊಂಡ ಗಾಂಜಾದ ಒಟ್ಟು ಮೌಲ್ಯ ರೂ.53,03,000/- ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಮೋದ್ ಕುಮಾರ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಗುಣಪಾಲ ಜೆ, ಹಾಗೂ ಸಿಬ್ಬಂದಿಗಳಾದ ದೇವರಾಜ್, ಹರ್ಷಿತ್, ಪ್ರಶಾಂತ್, ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಸುಬ್ರಮಣಿ, ಭೀಮಸೆನ್, ಸುರೇಶ್ ಮತ್ತು ದಿವ್ಯಾಪ್ರಕಾಶ್ ಅವರುಗಳು ಭಾಗವಹಿಸಿದ್ದರು.
ಪೊಲೀಸರ ಈ ಕಾರ್ಯಾಚರಣೆ ಮಾದಕ ವಸ್ತು ಜಾಲದ ವಿರುದ್ಧ ಮಹತ್ವದ ಸಾಧನೆಯಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

























