ಬೆಳ್ತಂಗಡಿ: ಇಲ್ಲಿಯ ಜೂನಿಯರ್ ಕಾಲೇಜು ಹಿಂದುಗಡೆ ರಸ್ತೆಯಲ್ಲಿ ಮುಸುಕುಧಾರಿಗಳ ತಂಡವೊಂದು ಕಾಲೇಜು ವಿದ್ಯಾರ್ಥಿನಿಗೆ ಚೂರಿಯಿಂದ ಹಲ್ಲೆಗೆ ಯತ್ನಿಸಿದ ಘಟನೆ ಇಂದು(ಫೆ.9) ಬೆಳಿಗ್ಗೆ ಸಂಭವಿಸಿದೆ.
ಇಂದು ಬೆಳಿಗ್ಗೆ ಸುಮಾರು 8.45 ಕ್ಕೆ ವಿದ್ಯಾರ್ಥಿನಿ ತನ್ನ ದ್ವಿಚಕ್ರವಾಹನದಲ್ಲಿ ಕಾಲೇಜಿಗೆ ಬರುತ್ತಿದ್ದಾಗ ಬೆಳ್ತಂಗಡಿ ಜೂನಿಯರ್ ಕಾಲೇಜಿನ ಹಿಂಭಾಗದಲ್ಲಿ ಕಾರಿನಲ್ಲಿ ಬಂದ ಮೂರು ಮಂದಿ ಮುಸುಕುಧಾರಿಗಳ ತಂಡ ದ್ವಿಚಕ್ರವಾಹನವನ್ನು ತಡೆಗಟ್ಟಿ ವಿದ್ಯಾರ್ಥಿನಿಗೆ ಚೂರಿಯಿಂದ ಹಲ್ಲೆಗೆ ಯತ್ನಿಸಿದರೆನ್ನಲಾಗಿದೆ.
ಈ ಸಂದರ್ಭ ವಿದ್ಯಾರ್ಥಿನಿ ತಪ್ಪಿಸಿಕೊಂಡಿದ್ದು ವಿದ್ಯಾರ್ಥಿನಿಯ ಕೈಗೆ ಗಾಯವಾಗಿದೆ. ಹಲ್ಲೆ ನಡೆಸಿದವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಬಾಲಕಿಯನ್ನು ಬೆಳ್ತಂಗಡಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದು, ಇದರ ಸತ್ಯಾಸತ್ಯತೆ ಇನ್ನಷ್ಟೇ ತಿಳಿದು ಬರಬೇಕಾಗಿದೆ.

























