ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಸರಗಳ್ಳತನ ಪ್ರಕರಣಗಳು ಸಾರ್ವಜನಿಕರ ನಿದ್ದೆಗೆಡಿಸಿವೆ. ಈ ನಡುವೆ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಮನೆ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಗೆ ಸ್ಪ್ರೇ ಹೊಡೆದು ದುಷ್ಕರ್ಮಿಗಳು ಒಡವೆ ದೋಚಿ ಪರಾರಿಯಾಗಿದ್ದಾರೆ. ಇತ್ತ ಕುಸಿದು ಬಿದ್ದ ಮಹಿಳೆ ಮೃತಪಟ್ಟಿದ್ದು, ಮೃತ ಜ್ಯೋತಿ(45) ಕತ್ತಲ್ಲಿದ್ದ ಮಾಂಗಲ್ಯ ಸರ ಮತ್ತು ಓಲೆಯನ್ನು ದುಷ್ಕರ್ಮಿಗಳು ದೋಚಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಮನೆಯವರು ಬೆಳಿಗ್ಗೆ 6.30ರ ವೇಳೆಗೆ ಮನೆಯಿಂದ ಹೊರ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮಕಾಡೆ ಬಿದಿದ್ದ ಜ್ಯೋತಿ ಕೈ ಮೇಲೆ ಮಾರ್ಕ್ ಕಂಡುಬಂದಿದ್ದು, ಅವರ ಮೈಮೇಲಿದ್ದ ಒಡವೆಗಳು ಇರಲಿಲ್ಲ. ಮುಂಜಾನೆ 5.30ರ ಸುಮಾರಿಗೆ ಕಸಗುಡಿಸಲೆಂದು ಅವರು ಮನೆಯಿಂದ ಹೊರ ಬಂದಿದ್ದು, ಈ ವೇಳೆ ಅಪರಿಚಿತರು ಕಳ್ಳತನ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕುಸಿದು ಬಿದ್ದ ಜ್ಯೋತಿಯವರನ್ನು ಕಂಡ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಅದಾಗಲೇ ಅವರು ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ಜ್ಯೋತಿ ಅವರ ಬಾಯಲ್ಲಿ ನೊರೆ ಕೂಡ ಕಂಡುಬಂದಿದ್ದು, ಸ್ಪ್ರೇ ಹೊಡೆದಿರುವ ಹಿನ್ನೆಲೆ ಉಸಿರುಗಟ್ಟಿ ಅವರು ಸಾವನ್ನಪ್ಪಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

























