ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಶಾಲಾ ರಸ್ತೆಯಲ್ಲಿರುವ ವಿಟ್ಲ ಹೋಬಳಿಯ ನಾಡಕಚೇರಿ ಪಕ್ಕದ ಸರಕಾರಿ ನಿವೇಶನದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿ ಪೂರ್ಣಗೊಂಡಿದ್ದರೂ ಇನ್ನೂ ಉದ್ಘಾಟನೆಯ ಭಾಗ್ಯ ದೊರೆತಿಲ್ಲ. 2023ನೇ ಸಾಲಿನಲ್ಲಿ ಆರಂಭಗೊಂಡ ಈ ಕಾಮಗಾರಿ ಇದೀಗ ಎರಡೂವರೆ ವರ್ಷಗಳ ಕಾಲ ವಿಳಂಬವಾಗಿದ್ದು, ಬಡವರ್ಗದ ಜನರಲ್ಲಿ ಅಸಮಾಧಾನ ಮೂಡಿಸಿದೆ.
ಅನುದಾನ ಮಂಜೂರಾಗಿ 6 ತಿಂಗಳ ಗಡುವಿನೊಳಗೆ 87 ಲಕ್ಷ ರೂ. ವೆಚ್ಚದಲ್ಲಿ ಅಡುಗೆ ಕೋಣೆ ಸಹಿತ ಇಂದಿರಾ ಕ್ಯಾಂಟೀನ್ ಆರಂಭಿಸಬೇಕಾಗಿತ್ತು. 5 ರೂ.ಗೆ ಉಪಹಾರ ಹಾಗೂ 10 ರೂ.ಗೆ ಮಧ್ಯಾಹ್ನ ಮತ್ತು ಸಂಜೆ ಊಟ ಬಡವರಿಗೆ ಒದಗಿಸುವ ಉದ್ದೇಶವಿತ್ತು. ಆದರೆ ಕಾಮಗಾರಿ ಪೂರ್ಣಗೊಂಡಿದ್ದರೂ ಕ್ಯಾಂಟೀನ್ ಆರಂಭವಾಗದೆ ಉಳಿದಿದೆ.
ನಿವೇಶನ ಗುರುತಿಸುವುದು, ಆಯ್ಕೆ ಪ್ರಕ್ರಿಯೆ ವೇಳೆ ಉಂಟಾದ ಗೊಂದಲ, ವಿರೋಧಗಳು ಹಾಗೂ ಅವುಗಳ ಪರಿಹಾರ ನಂತರ ಕಾಮಗಾರಿ ಆರಂಭಗೊಂಡಿತ್ತು. ನಿಧಾನಗತಿಯಲ್ಲಿ ಸಾಗಿದ ಕಾಮಗಾರಿ ಮಳೆಗಾಲದ ವೇಳೆ ಅಪಾಯಕಾರಿಯಾಗಿ ಹೊಂಡವನ್ನು ತೆರೆದೆಯೇ ಬಿಟ್ಟ ಘಟನೆಗೂ ಕಾರಣವಾಗಿತ್ತು. ಬಳಿಕ ಎಚ್ಚರಿಕೆ ನೀಡಿದ ನಂತರ ಸುರಕ್ಷತಾ ಕ್ರಮ ಕೈಗೊಳ್ಳಲಾಯಿತು.
ಈಗ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು, ಸುತ್ತಲೂ ಭದ್ರತೆ, ಗೇಟ್ ಅಳವಡಿಕೆ, ಸುಣ್ಣ ಬಣ್ಣ, ನಾಮಫಲಕ ಹಾಗೂ ದಿನನಿತ್ಯದ ಆಹಾರ ಪಟ್ಟಿ ಅಳವಡಿಸಲಾಗಿದೆ. ಇದೇ ಅವಧಿಯಲ್ಲಿ ಆರಂಭಗೊಂಡ ಇತರ ಕೆಲ ಇಂದಿರಾ ಕ್ಯಾಂಟೀನ್ಗಳು ಈಗಾಗಲೇ ಉದ್ಘಾಟನೆಗೊಂಡಿರುವುದು ವಿಟ್ಲದ ಜನರಲ್ಲಿ ಇನ್ನಷ್ಟು ಪ್ರಶ್ನೆಗಳನ್ನು ಎಬ್ಬಿಸಿದೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ವಿಟ್ಲದಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗದಿರುವುದು ಬಡವರು ಹಾಗೂ ಕೂಲಿ ಕಾರ್ಮಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಉದ್ಯೋಗ ಕೊರತೆಯ ನಡುವೆಯೂ ಕಡಿಮೆ ದರದ ಆಹಾರ ಸಿಗದಿರುವುದು ಅವರ ಬದುಕಿಗೆ ಹೊರೆ ತಂದಿದೆ.
ಇಂದಿರಾ ಕ್ಯಾಂಟೀನ್ ಶೀಘ್ರ ಆರಂಭಿಸಬೇಕೆಂಬ ಜನರ ಒತ್ತಡ ಹೆಚ್ಚಾಗುತ್ತಿದ್ದು, ಆದರೆ ಅಧಿಕಾರಿಗಳಿಂದ ತೀವ್ರ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಭಾಷಣಗಳಲ್ಲಿ ಮಾತ್ರ ಬಡವರ ಬಗ್ಗೆ ಕಾಳಜಿ, ಆದರೆ ನೈಜವಾಗಿ ಅದು ಕಾಣುತ್ತಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಿಟ್ಲ ಪ.ಪಂ. ಮುಖ್ಯಾಧಿಕಾರಿ ಕರುಣಾಕರ ವಿ. ಅವರು, ಇಂದಿರಾ ಕ್ಯಾಂಟೀನ್ನಲ್ಲಿ ಕೆಲವೊಂದು ಉಪಕರಣಗಳನ್ನು ಜೋಡಿಸುವುದು ಬಾಕಿಯಿದ್ದು, ಅವು ಪೂರ್ಣಗೊಂಡ ತಕ್ಷಣ ಕ್ಯಾಂಟೀನ್ ಆರಂಭಿಸಲಾಗುವುದು ಎಂದರು. ಇಡೀ ರಾಜ್ಯದ ಇಂದಿರಾ ಕ್ಯಾಂಟೀನ್ ಕಾಮಗಾರಿಯನ್ನು ಒಂದೇ ಸಂಸ್ಥೆಗೆ ಗುತ್ತಿಗೆ ನೀಡಿರುವುದರಿಂದ ವಿಳಂಬವಾಗಿದೆ ಎಂದು ತಿಳಿಸಿದರು.

























