ಉಪ್ಪಿನಂಗಡಿ, ಫೆ.10: ಉಪ್ಪಿನಂಗಡಿ ಗ್ರಾಮದ ಪಂಜಳ ಪ್ರದೇಶದಲ್ಲಿ ಹಗಲು ರೌಂಡ್ಸ್ ವೇಳೆ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಎಂ.ಡಿ.ಎಂ.ಎ. ಮಾದಕ ವಸ್ತು ಪತ್ತೆಯಾಗಿದೆ.
ಬಂಧಿತನನ್ನು ಯಹ್ಯಾ ಕೊಕ್ಕಡ (48) ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಆತನು ಮಾರಾಟ ಉದ್ದೇಶದಿಂದ ಎಂ.ಡಿ.ಎಂ.ಎ. ಹೊಂದಿರುವುದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪಂಚರ ಸಮ್ಮುಖದಲ್ಲಿ ನಡೆಸಿದ ಮಹಜರಿನಲ್ಲಿ ಆರೋಪಿಯಿಂದ ಒಟ್ಟು 2.16 ಗ್ರಾಂ ಎಂ.ಡಿ.ಎಂ.ಎ. (ಅಂದಾಜು ಮೌಲ್ಯ ರೂ.3,000/-), ಒಂದು ಐಫೋನ್ (ಅಂದಾಜು ಮೌಲ್ಯ ರೂ.45,000/-) ಹಾಗೂ ಒಂದು ಸ್ಯಾಮ್ಸಂಗ್ ಕೀ-ಪ್ಯಾಡ್ ಮೊಬೈಲ್ (ಅಂದಾಜು ಮೌಲ್ಯ ರೂ.1,000/-) ವಶಪಡಿಸಿಕೊಳ್ಳಲಾಗಿದೆ. ಒಟ್ಟು ರೂ.49,000/- ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ.
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 19/2026ರಡಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(ಸಿ), 22(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.


























