ಬೆಳ್ತಂಗಡಿ: ತಾಲೂಕಿನ ಬಳಂಜ ಗ್ರಾಮದ ಪರಾರಿ ಪ್ರದೇಶದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಶಾಲಾ ಮಕ್ಕಳನ್ನು ಅಪಾಯಕಾರಿ ರೀತಿಯಲ್ಲಿ ಸಾಗಿಸಿದ ಘಟನೆ ಬೆಳಕಿಗೆ ಬಂದಿದೆ. ಫೆಬ್ರವರಿ 09, 2026 ರಂದು ಬಳಂಜ-ನಾಲ್ಕೂರು ಸಾರ್ವಜನಿಕ ರಸ್ತೆಯಲ್ಲಿ ಬಳಂಜ ಕಡೆಯಿಂದ ಟಿಪ್ಪರ್ ಲಾರಿ (ನಂ. KA-70-2596) ಹಾಗೂ ಪಿಕ್ಅಪ್ ವಾಹನ (ನಂ. KA-21A-8776)ಗಳಲ್ಲಿ ಶಾಲಾ ಮಕ್ಕಳನ್ನು ತುಂಬಿಸಿಕೊಂಡು ನಾಲ್ಕೂರು ಗ್ರಾಮದ ನರ್ಸರಿಗೆ ಅಧ್ಯಯನಕ್ಕಾಗಿ ಕರೆದೊಯ್ಯಲಾಗಿತ್ತು.
ಈ ಕುರಿತು ಬಳಂಜ ಗ್ರಾಮ ನಿವಾಸಿ ಧರಣೇಂದ್ರ ಅವರು ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.ಕ್ರ. 14/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281 ಹಾಗೂ ಐಎಂವಿ ಕಾಯ್ದೆಯ ಕಲಂ 66 ಜೊತೆಗೆ 192(ಎ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಶಾಲಾ ಮಕ್ಕಳನ್ನು ನಿಯಮಬಾಹಿರ ಹಾಗೂ ಅಪಾಯಕಾರಿ ರೀತಿಯಲ್ಲಿ ವಾಹನಗಳಲ್ಲಿ ಸಾಗಿಸಿದ ಹಿನ್ನೆಲೆಯಲ್ಲಿ ಸಂಬಂಧಿಸಿದ ಶಾಲಾ ಆಡಳಿತದವರ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ಪೊಲೀಸರು ತಿಳಿಸಿದ್ದಾರೆ.


























