ಮಂಗಳೂರು:ತನ್ನ ಪತ್ನಿ ಮಾಜಿ ಸಂಸದರೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಮಾಧ್ಯಮಗಳಲ್ಲಿ ಪ್ರಸಾರ ಮಾಡಿಸಿ ಗೌರವಕ್ಕೆ ಧಕ್ಕೆಯನ್ನುಂಟು ಮಾಡಿದ ಆರೋಪಿಗೆ ಮಂಗಳೂರು ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಮುಂಬೈ ಥಾಣೆಯ ಮೀರಾ ರೋಡ್ ಈಸ್ಟ್ ನಿವಾಸಿ ಸತೀಶ್ ಶೆಟ್ಟಿ ಶಿಕ್ಷೆಗೊಳಗಾದ ಆರೋಪಿ.ಆರೋಪಿಯು ಮಕ್ಕಳಾದ ಬಳಿಕ ತನಗೆ ಮಾನಸಿಕ ಹಿಂಸೆ ನೀಡುತ್ತಿದ್ದ.ಹಾಗಾಗಿ ತಾನು ತಾಯಿಯ ಮನೆಯಲ್ಲಿ ವಾಸವಾಗಿದ್ದೆ.ಪತಿ ಕಿರುಕುಳ ನೀಡುತ್ತಿದ್ದ ಬಗ್ಗೆ ಪೊಲೀಸರಿಗೆ ದೂರು ಕೂಡಾ ನೀಡಿದ್ದೆ. ಈ ಮಧ್ಯೆ, ನನಗೆ ಮಾಜಿ ಸಂಸದ ನಳಿನ್ ಕುಮಾರ್ ಅವರ ಜೊತೆ ಅಕ್ರಮ ಸಂಬಂಧವಿದೆ ಎಂದು ಹೇಳಿ 2014ರ ಮೇ 13ರಂದು ಖಾಸಗಿ ಟಿವಿ ಚಾನೆಲ್ ಹಾಗೂ ಎರಡು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಿಸಿ ತನ್ನ ಗೌರವಕ್ಕೆ ಧಕ್ಕೆಯನ್ನುಂಟು ಮಾಡಿದ್ದಾಗಿ ಆರೋಪಿಸಿ ಪತಿ ಸತೀಶ್ ಶೆಟ್ಟಿ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದರು.
ವಿಚಾರಣೆ ನಡೆಸಿದ ಮಂಗಳೂರು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ 3ನೇ ನ್ಯಾಯಾಲಯದ ನ್ಯಾಯಾಧೀಶ ಸುರೇಶ ಇ.ಎಸ್.ಅವರು ಆರೋಪಿ ಸತೀಶ್ ಶೆಟ್ಟಿಗೆ ಐಪಿಸಿ ಕಲಂ 509ರಡಿ ಒಂದು ವರ್ಷ ಸಾದಾ ಸಜೆ ಮತ್ತು 5,000 ರೂ.ದಂಡ ವಿಧಿಸಿದ್ದಾರೆ.ದಂಡ ಪಾವತಿಸಲು ತಪ್ಪಿದರೆ ಒಂದು ತಿಂಗಳು ಹೆಚ್ಚುವರಿ ಸಾದಾ ಸಜೆ ಅನುಭವಿಸುವಂತೆ ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ನೇತ್ರಾವತಿ ಮತ್ತು ಗೀತಾ ರೈ ವಾದಿಸಿದ್ದರು.

























