ಹಾಸನ: ನಗರದಲ್ಲಿ ಎಂಡಿಎಂಎ ಮಾದಕ ವಸ್ತುಗಳ ಮಾರಾಟ ಜಾಲವನ್ನು ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚೆಕ್‌ಪೋಸ್ಟ್ ಬಳಿ ಕಾರಿನಲ್ಲಿ ಸುಮಾರು 40 ಗ್ರಾಂ ಎಂಡಿಎಂಎ ಪತ್ತೆಯಾಗಿದ್ದು, ಅದರ ಮೌಲ್ಯ ರೂ.2 ಲಕ್ಷಕ್ಕೂ ಅಧಿಕವೆಂದು ಅಂದಾಜಿಸಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ಹಾಸನದ ರಾಜ್‌ಕುಮಾರ್ ನಗರ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಸಂಚರಿಸುತ್ತಿದ್ದ ಎರ್ಟಿಗಾ ಕಾರನ್ನು ತಪಾಸಣೆ ನಡೆಸಿದ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತರನ್ನು ಶಿವಮೊಗ್ಗ ಮೂಲದ ಫರ್ವೀಜ್ (29), ಸುಹೇಲ್ (24), ಅಬ್ದುಲ್ ಯಾಸಿನ್ (20), ಇಬ್ರತ್ ಖಾನ್ (24) ಹಾಗೂ ಹಾಸನದ ಸೈಯದ್ ಯೂಸಫ್ (23) ಎಂದು ಗುರುತಿಸಲಾಗಿದೆ. ನಾಲ್ವರು ಶಿವಮೊಗ್ಗ ಜಿಲ್ಲೆಯವರಾಗಿದ್ದು, ಒಬ್ಬ ಹಾಸನ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. 40 ಗ್ರಾಂ ಎಂಡಿಎಂಎ ಹಾಗೂ ಆರೋಪಿಗಳು ಬಳಸುತ್ತಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಪೆನ್‌ಷನ್ ಮೊಹಲ್ಲಾ ಠಾಣೆಯ ಸಿಪಿಐ ಸ್ವಾಮಿನಾಥ್ ನೇತೃತ್ವದಲ್ಲಿ ಪಿಎಸ್‌ಐ ರವಿಶಂಕರ್ ಹಾಗೂ ಸಿಬ್ಬಂದಿ ಪ್ರಸನ್ನಕುಮಾರ್, ದಿಲೀಪ್, ಪುನೀತ್, ಲೋಕೇಶ್, ಹನುಮೇಶ್ ಸೇರಿದಂತೆ ಇತರರು ಕಾರ್ಯಾಚರಣೆ ನಡೆಸಿದ್ದು, ಪ್ರಕರಣವನ್ನು ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.


























