ಬೆಂಗಳೂರು: ನೆಲಮಂಗಲ ಜಿಂದಾಲ್ ಬಳಿ KSRTC ಬಸ್ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ ಐವರು ಮೃತಪಟ್ಟಿರುವ ಘಟನೆ ನಡೆದಿದೆ. ಇಂಡಿಕಾ ಕಾರಿನಲ್ಲಿದ್ದ ಐವರು ದುರ್ಮರಣ ಹೊಂದಿದ್ದು, ದೊಡ್ಡಬಳ್ಳಾಪುರದ ಹರ್ಷಿತ್, ನಿಖಿತ್ ಸೇರಿ ಇತರರು ಮೃತ ದುರ್ದೈವಿಗಳಾಗಿದ್ದಾರೆ. ತುಮಕೂರು ಕಡೆಯಿಂದ ಬರುತ್ತಿದ್ದ ಕಾರು ಡಿವೈಡರ್ ಜಂಪ್ ಮಾಡಿ ಬೆಂಗಳೂರು ಕಡೆಯಿಂದ ಹೊರಟಿದ್ದ KSRTC ಬಸ್ಗೆ ಡಿಕ್ಕಿಯಾಗಿದ್ದು, ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಐವರ ಮೃತದೇಹ ರವಾನೆ ಮಾಡಲಾಗಿದೆ.
ಸಾವಿಗೀಡಾದವರಲ್ಲಿ ಮೂವರ ಗುರುತು ಇನ್ನೂ ಪತ್ತೆಯಾಗಿಲ್ಲ ಎನ್ನಲಾಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮೃತ ಹರ್ಷಿತ್ ರಾಜನಕುಂಟೆ ಸಾಯಿ ವಿದ್ಯಾ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ದ್ವಿತೀಯ ವರ್ಷದ ಡಿಗ್ರಿ ಓದುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ. ಅಪಘಾತದ ರಭಸಕ್ಕೆ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದರೆ, ಗಂಭೀರ ಗಾಯಗೊಂಡಿದ್ದ ಕಾರು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತನೂ ಪ್ರಾಣ ಬಿಟ್ಟಿದ್ದಾನೆ.
ಇನ್ನು ಮೃತ ಹರ್ಷಿತ್ ರಾತ್ರಿ 8.30ರ ವರೆಗೂ ಮನೆಯಲ್ಲಿಯೇ ಇದ್ದ. ಬಳಿಕ ಸ್ನೇಹಿತನ ಭೇಟಿ ಮಾಡಿ ಬಂದ್ಬಿಡ್ತೀನಿ ಅಂತ ಮನೆಯಿಂದ ಹೊರ ಬಂದಿದ್ದ. ತುಮಕೂರು ಕಡೆಯಿಂದ ಬೆಂಗಳೂರಿನತ್ತ ಕಾರಿನಲ್ಲಿ ಐವರು ಬರುತ್ತಿದ್ದಾಗ ಅಪಘಾತ ನಡೆದಿದ್ದು, ಕಾರು ಗುದ್ದಿದ ಪರಿಣಾಮ ಬಸ್ ಮುಂಭಾಗ ಜಖಂ ಆಗಿದ್ದರೆ, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಮುಂಭಾಗ ಮೃತ ಹರ್ಷಿತ್ ತಾಯಿಯ ಗೋಳಾಟ ಕರುಳು ಹಿಂಡುವಂತಿದ್ದು, ಮಗನ ಮೃತದೇಹ ತಬ್ಬಿ ಕಣ್ಣೀರು ಹಾಕಿದ್ದಾರೆ.
ಶುಕ್ರವಾರವಷ್ಟೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಏಳು ಜನ ದುರ್ಮರಣ ಹೊಂದಿದ್ದರು. ಹೊಸಕೋಟೆ–ದಾಬಸ್ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್ ವಾಹನ, ಬೈಕ್ ಹಾಗೂ ಎಕ್ಸ್ ಯುವಿ ಕಾರಿನ ನಡುವೆ ಸರಣಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಕಾರಿನಲ್ಲಿದ್ದ ಆರು ಮಂದಿ ಮತ್ತು ಬೈಕ್ ಸವಾರ ಪ್ರಾಣ ಬಿಟ್ಟಿದ್ದರು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಅವಘಡವೀಗ ನಡೆದಿದೆ.

























