ಪುತ್ತೂರು : ಮಹಿಳಾ ಸರಕಾರಿ ಪದವಿ ಕಾಲೇಜಿನಲ್ಲಿ ಆರೋಗ್ಯ ಇಲಾಖೆಯ ಕಟ್ಟಡ ಕಾಮಗಾರಿಯಿಂದ ಬರುತ್ತಿರುವ ಧೂಳಿನ ಸಮಸ್ಯೆಯ ವಿರುದ್ಧ ವಿದ್ಯಾರ್ಥಿನಿಯರು ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದ ಘಟನೆ ಸೋಮವಾರ ನಡೆದಿದೆ.
ವಿದ್ಯಾರ್ಥಿನಿಯರ ಬಳಿ ಶಾಸಕ ಅಶೋಕ್ ಕುಮಾರ್ ರೈ ಆಗಮಿಸಿದರು. ಈ ವೇಳೆ ನೀವು ಪ್ರತಿಭಟನೆ ಮಾಡುವುದು ಸರಿ ಅಲ್ಲ, ನಿಮಗೆ ಹೊಸ ಕಟ್ಟಡಕ್ಕೆ ಅನುದಾನ ಕೊಡಿಸಿರುವುದು ನಾನೇ. ತರಗತಿಗೆ ಹೋಗಿ ಎಂದರು. ಸಮಸ್ಯೆಯನ್ನು ನನ್ನ ಗಮನಕ್ಕೆ ಏಕೆ ತಂದಿಲ್ಲ ಎಂದು ಪ್ರಾಂಶುಪಾಲರು, ಉಪನ್ಯಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಐವನ್ ಪ್ರಾನ್ಸಿಸ್ ಲೋಬೋ ಅವರು ಶಾಸಕರಿಗೆ ಧೂಳಿನಿಂದ ವಿದ್ಯಾರ್ಥಿನಿಯರು ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಬಗ್ಗೆ ವಿವರಿಸಲು ಮುಂದಾದಾಗ ಶಾಸಕರು ಆಕ್ರೋಶ ವ್ಯಕ್ತಪಡಿಸಿದಲ್ಲದೇ ಅವರ ವಿರುದ್ಧ ಹರಿಹಾಯ್ದ ಘಟನೆ ನಡೆಯಿತು.
ಮಹಿಳಾ ಕಾಲೇಜಿಗೆ ಇರುವ ಕಟ್ಟಡದ ಒಂದು ಭಾಗದಲ್ಲಿ ಆಸ್ಪತ್ರೆಗೆ ಸಂಬಂಧಿಸಿದಂತೆ ಡಯಾಲಿಸಿಸ್ ಸೆಂಟರ್ ಸ್ಥಾಪನೆಗೆ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಳೆದ ಕೆಲ ತಿಂಗಳಿನಿಂದ ಈ ಕೆಲಸ ಪ್ರಗತಿಯಲ್ಲಿದ್ದುಕಾಮಗಾರಿಯಿಂದ ಧೂಳು ತರಗತಿ ಕೊಠಡಿಯೊಳಗೆ ಬರುತ್ತಿದ್ದು ಇದರಿಂದ ವಿದ್ಯಾರ್ಥಿನಿಯರು ಆಸ್ಪತ್ರೆಗೆ ಹೋಗುತ್ತಿದ್ದಾರೆ. ನಮಗೆ ಉಸಿರಾಟ ಸಮಸ್ಯೆ ಉಂಟಾಗಿದೆ ಎಂದು ಪ್ರತಿಭಟನ ನಿರತ ವಿದ್ಯಾರ್ಥಿನಿಯರು ಶಾಸಕರ ಗಮನಕ್ಕೆ ತಂದರು.
ಶಾಸಕರು ಗುತ್ತಿಗೆದಾರರಿಗೆ ಧೂಳಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸುತಿದ್ದ ನಡುವೆ ಶಾಸಕ ಅಶೋಕ್ ಕುಮಾರ್ ರೈ ಅವರು ಪ್ರಾಂಶುಪಾಲೆ ವೇದಶ್ರೀ ನಿಡ್ಯ ಅವರನ್ನು ಇಲ್ಲಿ ಬಂದು ಸುಮ್ಮನೇ ಟೈಮ್ ವೇಸ್ಟ್ ಮಾಡುವುದು ಬೇಡ ಎಂದಾಗ ಗರಂ ಆದ ಪ್ರಾಂಶುಪಾಲೆಯು ನೀವು ನೋಡಿ ಮಾತನಾಡಬೇಕು. ಸುಮ್ಮನೆ ಹೇಳುವುದು ಬೇಡ ಎಂದು ಉತ್ತರಿಸಿದರು.
ಪ್ರತಿಭಟನ ಸ್ಥಳ ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಬಿಜೆಪಿ ನಾಯಕರು ಆಗಮಿಸಿ ವಿದ್ಯಾರ್ಥಿನಿಯರ ಅಳಲು ಆಲಿಸಿದರು.
ಪ್ರತಿಭಟನೆ ಹಿಂಪಡೆತ
ಮುಂದಿನ 45 ದಿನಗಳಲ್ಲಿ ಬೊಳುವಾರಿನ ಹೊಸ ಕಟ್ಟಡಕ್ಕೆ ಕಾಲೇಜು ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು. ಧೂಳಿನ ಸಮಸ್ಯೆ ಪರಿಹರಿಸಲು ಗುತ್ತಿಗೆದಾರರಿಗೆ ಸೂಚನೆ ನೀಡುತ್ತೇನೆ ಎಂದು ಶಾಸಕರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ತಹಶೀಲ್ದಾರ್ ಕೂಡಲಗಿ, ಡಿವೈಎಸ್ಪಿ ಪ್ರಮೋದ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.


























