ಮಾಣಿ:ರಾಷ್ಟ್ರೀಯ ಹೆದ್ದಾರಿಯ ಮಾಣಿ–ಮೈಸೂರು ಜಂಕ್ಷನ್‌ನಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಮುಂಭಾಗ ಸಂಪೂರ್ಣ ಜಖಂಗೊಂಡ ಘಟನೆ ನಡೆದಿದೆ.
ಅದೃಷ್ಟವಶಾತ್ ಇಬ್ಬರು ಚಾಲಕರು ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಫ್ಲೈಓವರ್ ಕೆಳಭಾಗದಿಂದ ಪುತ್ತೂರು ಕಡೆಗೆ ಸಾಗುತ್ತಿದ್ದ ಕಾರಿಗೆ, ಉಪ್ಪಿನಂಗಡಿ ಕಡೆಯಿಂದ ಸರ್ವಿಸ್ ರಸ್ತೆಯ ಮೂಲಕ ಬರುತ್ತಿದ್ದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಎರಡೂ ವಾಹನಗಳ ಮುಂಭಾಗಕ್ಕೆ ಭಾರೀ ಹಾನಿಯಾಗಿದೆ.
ಘಟನೆಯ ಬಳಿಕ ಸ್ಥಳದಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸ್ಥಳೀಯರು ಸಹಾಯಕ್ಕೆ ಧಾವಿಸಿದರು. ಚಾಲಕರಿಬ್ಬರೂ ಅಪಾಯದಿಂದ ಪಾರಾಗಿರುವುದು ಪವಾಡಸದೃಶ್ಯವೆಂದು ಸ್ಥಳೀಯರು ತಿಳಿಸಿದ್ದಾರೆ.
ಫ್ಲೈಓವರ್ ಕೆಳಭಾಗದಲ್ಲಿರುವ ಈ ಜಂಕ್ಷನ್‌ನಲ್ಲಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸ್ವಲ್ಪ ಗಮನ ತಪ್ಪಿದರೂ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಉಪ್ಪಿನಂಗಡಿ ಕಡೆಯಿಂದ ಬರುವ ಸರ್ವಿಸ್ ರಸ್ತೆಗೆ ವೇಗ ನಿಯಂತ್ರಣಕ್ಕಾಗಿ ಹಂಪ್ಸ್ ಅಳವಡಿಸಿದರೆ ಅಪಘಾತಗಳನ್ನು ತಪ್ಪಿಸಬಹುದೆಂದು ಸ್ಥಳೀಯ ರಿಕ್ಷಾ ಚಾಲಕರು ಅಭಿಪ್ರಾಯಪಟ್ಟಿದ್ದಾರೆ.


























