ಪುತ್ತೂರು: ನಗರದ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ರಕ್ಷಣೆಗಾಗಿ ಸಜ್ಜುಗೊಂಡಿರುವ ಮಕ್ಕಳ ವಿಶೇಷ ಪೊಲೀಸ್ ಘಟಕ (Special Juvenile Police Unit – SJPU) ಯ ಉದ್ಘಾಟನಾ ಸಮಾರಂಭವು ಫೆಬ್ರವರಿ 18, ಬುಧವಾರ ಸಂಜೆ 7:00 ಗಂಟೆಗೆ ನಡೆಯಲಿದೆ. ಈ ಘಟಕವನ್ನು ರೋಟರಿ ಕ್ಲಬ್ ಪುತ್ತೂರು ಯುವ ವತಿಯಿಂದ ಮಕ್ಕಳ ಸ್ನೇಹಿ ವಿನ್ಯಾಸದಲ್ಲಿ ಅಲಂಕರಿಸಿ ಸಜ್ಜುಗೊಳಿಸಲಾಗಿದೆ.
ಈ ಉದ್ಘಾಟನೆಯ ವಿಶೇಷತೆ ಎಂದರೆ ರೋಟರಿ ಯುವ ಕುಟುಂಬದ ಪುಟಾಣಿ ಮಕ್ಕಳೇ ಈ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ. “ಮಕ್ಕಳ ಕೈಯಿಂದಲೇ ಮಕ್ಕಳ ರಕ್ಷಣೆಗೆ ಮೀಸಲಾದ ಘಟಕ” ಆರಂಭಗೊಳ್ಳುತ್ತಿರುವುದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ.
ಕಾರ್ಯಕ್ರಮದ ಗೌರವ ಉಪಸ್ಥಿತಿಯಲ್ಲಿ ಪುತ್ತೂರಿನ ಡಿವೈಎಸ್ಪಿ ಶ್ರೀ ಪ್ರಮೋದ್ ಕುಮಾರ್ ಉಪಸ್ಥಿತರಿರಲಿದ್ದು, ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ಚಕ್ರಪಾಣಿ ಎ ಕೆ ಹಾಗೂ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ ಜಾನ್ಸನ್ ಕಿರಣ್ ಡಿ ಸೋಜ ವಿಶೇಷವಾಗಿ ಭಾಗವಹಿಸಲಿದ್ದಾರೆ. ರೋಟರಿ ಕ್ಲಬ್ ಪುತ್ತೂರು ಯುವ ಇದರ ಅಧ್ಯಕ್ಷರಾದ ಶ್ರೀ ಕುಸುಮ್ ರಾಜ್ ಉಪಸ್ಥಿತರಿರುತ್ತಾರೆ.
ಇದೇ ವೇಳೆ ‘ಐ.ಎ.ಎಸ್ ದರ್ಶನ’ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ದರ್ಶನ್ ಗರ್ತಿಕೆರೆ ಅವರು ವಿದ್ಯಾರ್ಥಿಗಳಿಗೆ ಹಾಗೂ ಪೊಲೀಸ್ ಸಿಬ್ಬಂದಿ ಗಳಿಗೆ ಐ.ಪಿ.ಎಸ್ ಅಧಿಕಾರಿಯಾಗುವ ಕುರಿತು ಪ್ರೇರಣಾದಾಯಕ ಮಾಹಿತಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಪುತ್ತೂರಿನಲ್ಲಿ ಅನೇಕ ವರ್ಷಗಳ ಕಾಲ ಪ್ರಾಮಾಣಿಕ ಹಾಗೂ ನಿಷ್ಠಾವಂತ ಸೇವೆ ಸಲ್ಲಿಸಿ ಪ್ರಸ್ತುತ ಸುಬ್ರಹ್ಮಣ್ಯಕ್ಕೆ ವರ್ಗಾವಣೆಗೊಂಡಿರುವ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಆಂಜನೇಯ ರೆಡ್ಡಿ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮವೂ ನಡೆಯಲಿದೆ.
ಮಕ್ಕಳ ವಿಶೇಷ ಪೊಲೀಸ್ ಘಟಕವೆಂದರೆ ಏನು?
Juvenile Justice (Care and Protection of Children) Act, 2015 ರ ಸೆಕ್ಷನ್ 107ರ ಪ್ರಕಾರ ಪ್ರತಿ ಜಿಲ್ಲೆ ಹಾಗೂ ನಗರದಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕ ಸ್ಥಾಪನೆ ಕಡ್ಡಾಯವಾಗಿದೆ.
ಮಕ್ಕಳ ವಿಶೇಷ ಪೊಲೀಸ್ ಘಟಕವು ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆ, ಬಾಲ ಅಪರಾಧ ಪ್ರಕರಣಗಳ ಸಂವೇದನಾಶೀಲ ತನಿಖೆ ಹಾಗೂ ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುವ ವಿಶೇಷ ವ್ಯವಸ್ಥೆಯಾಗಿದೆ. ಬಾಲಕಾರ್ಮಿಕತೆ, ಬಾಲ್ಯವಿವಾಹ, ಶಾಲೆ–ಕಾಲೇಜು, ಸಾರ್ವಜನಿಕ ಸ್ಥಳಗಳು ಅಥವಾ ಮನೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ, ಮಾನವ ಕಳ್ಳಸಾಗಣೆ ಮುಂತಾದ ಪ್ರಕರಣಗಳಲ್ಲಿ ಮಕ್ಕಳಿಗೆ ಭಯವಿಲ್ಲದೆ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಸ್ನೇಹಪೂರ್ಣ ವಾತಾವರಣ ಕಲ್ಪಿಸುವುದು ಇದರ ಉದ್ದೇಶವಾಗಿದೆ.
ಘಟಕದ ಕೊಠಡಿಯನ್ನು ಮಕ್ಕಳ ಮನಸ್ಸಿಗೆ ಹತ್ತಿರವಾಗುವಂತೆ ಆಕರ್ಷಕ ವರ್ಣಚಿತ್ರಗಳು ಹಾಗೂ ಶೈಕ್ಷಣಿಕ ಸಂದೇಶಗಳಿಂದ ವಿನ್ಯಾಸಗೊಳಿಸಲಾಗಿದೆ. ಮಕ್ಕಳಿಗೆ ಪೊಲೀಸ್ ವ್ಯವಸ್ಥೆಯ ಬಗ್ಗೆ ಭಯವಿಲ್ಲದೆ ವಿಶ್ವಾಸ ಮೂಡುವಂತೆ ಈ ಘಟಕ ಕಾರ್ಯನಿರ್ವಹಿಸಲಿದೆ.
‘ತೆರೆದ ಮನೆ’ ಎಂಬ ಯೋಜನೆಯಡಿ ಪ್ರತಿ ಗುರುವಾರ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಭೇಟಿ ನೀಡಿ ಮಕ್ಕಳ ವಿಶೇಷ ಪೊಲೀಸ್ ಘಟಕವನ್ನು ವೀಕ್ಷಿಸಿ, ತಮ್ಮ ಮೇಲಿನ ದೌರ್ಜನ್ಯ ಅಥವಾ ಯಾವುದೇ ಸಂಕಷ್ಟಗಳ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಆತ್ಮೀಯವಾಗಿ ಚರ್ಚಿಸಲು ಅವಕಾಶ ಕಲ್ಪಿಸಲಾಗುತ್ತದೆ. ಮಕ್ಕಳ ಸಮಸ್ಯೆಗಳಿಗೆ ತ್ವರಿತ ಹಾಗೂ ಸಂವೇದನಾಶೀಲ ಪರಿಹಾರ ಒದಗಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಸಮಾಜದಲ್ಲಿ ಮಕ್ಕಳ ಸುರಕ್ಷತೆ ಎಲ್ಲರ ಜವಾಬ್ದಾರಿಯಾಗಿದ್ದು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳ ರಕ್ಷಣೆಯ ಈ ಮಹತ್ವದ ಹೆಜ್ಜೆಗೆ ಬೆಂಬಲ ನೀಡುವಂತೆ ಆಯೋಜಕರು ಮನವಿ ಮಾಡಿದ್ದಾರೆ.


























