ವಿಟ್ಲ:ಬೇಕರಿಯೊಂದರಲ್ಲಿ ಕಾನೂನು ಬಾಹಿರವಾಗಿ ‘ಅದೃಷ್ಟದ ಮಟ್ಕಾ ಆಟ’ ಆಡಿಸುತ್ತಿದ್ದ ಮಾಹಿತಿಯಾಧರಿಸಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿರುವ ಘಟನೆ ವರದಿಯಾಗಿದೆ.
ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಮಕೃಷ್ಣರವರು ಸಿಬ್ಬಂದಿಗಳೊಂದಿಗೆ ಫೆ.14ರಂದು ವಿಟ್ಲಪೇಟೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ಇದ್ದಾಗ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕ ಎಂಬಲ್ಲಿರುವ ಬೇಕರಿಯಲ್ಲಿ ಅಂಗಡಿ ಮಾಲೀಕ ಕುದ್ದುಪದವು ನಿವಾಸಿ ರವೀಶ್ ಎಂಬಾತ ಅದೃಷ್ಟದ ಮಟ್ಕಾಜೂಜಾಟವನ್ನು ಮೊಬೈಲ್ ಮೂಲಕ ಆಡಿಸುತ್ತಿದ್ದ ಕುರಿತು ಬಂದ ಮಾಹಿತಿಯಂತೆ ಬೇಕರಿಗೆ ದಾಳಿ ನಡೆಸಿದ್ದರು.
ಅಲ್ಲಿ ಮಟ್ಕಾ ಆಟ ಆಡಿಸುತ್ತಿದ್ದ ಆರೋಪಿ ರವೀರ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ‘ನಾನು ಅದೃಷ್ಟದ ಆಟವಾದ ಮಟ್ಕಾವನ್ನು ಆಡಿಸುತ್ತಿದ್ದು, 00-99ವರೆಗಿನ ನಂಬರಿಗೆ ಅದೃಷ್ಟದ ಆಟದಲ್ಲಿ ಆಡುವ ಜನರು ನನ್ನ ಬಳಿ ಬಂದು ಅವರ ಇಚ್ಛೆಯ ಸಂಖ್ಯೆಗೆ ಹಣವನ್ನು ಕಟ್ಟಿ ಹೋಗುತ್ತಾರೆ. ಇಲ್ಲವೇ ಮೊಬೈಲ್ ವಾಟ್ಸಾಪ್ ಮೂಲಕ ಅದೃಷ್ಟ ಸಂಖ್ಯೆಯನ್ನು ಕಳುಹಿಸಿಕೊಡುತ್ತಾರೆ.ಅವರು ತಿಳಿಸಿದ ನಂಬರನ್ನು ನಾನು ನನ್ನ ಮೊಬೈಲ್‌ನಲ್ಲಿರುವ ವಾಟ್ಸಾಪ್ ನಲ್ಲಿರುವShetty Numbers ಎಂಬ ಗ್ರೂಪಿಗೆ ಕಳುಹಿಸಿಕೊಡುತ್ತೇನೆ.
ನಂತರ ಅದೃಷ್ಟದ ನಂಬರ್ ಹಾಕಿದ ವ್ಯಕ್ತಿಗಳು ಹಣವನ್ನು ಅಂಗಡಿಗೆ ತಂದು ನೀಡುತ್ತಾರೆ. ಮಟ್ಕಾ ಆಟದಲ್ಲಿ 10 ರೂಪಾಯಿಗೆ 700 ರೂಪಾಯಿಯಂತೆ ಸಿಗುತ್ತದೆ.ಈ ದಿನವೂ ಅದೃಷ್ಟದ ಮಟ್ಕಾ ಆಟ ಆಡಿಸುತ್ತಿದ್ದು ಇದರಿಂದ ನನಗೆ ಲಾಭವಾಗುವುದಾಗಿ’ ಆರೋಪಿ ರವೀಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಆರೋಪಿಯು ಕಾನೂನು ಬಾಹಿರವಾಗಿ ಅದೃಷ್ಟದ ಮಟ್ಕಾ ಆಟ ಆಡುತ್ತಿರುವುದು ಖಚಿತವಾಗಿರುವುದರಿಂದ ಆತನನ್ನು ವಶಕ್ಕೆ ಪಡೆದುಕೊಂಡು ಆತನ ಬಳಿಯಲ್ಲಿದ್ದ ಆಟಕ್ಕೆ ಬಳಸಿದ Redme Note-14 5G ಎಂಬ ಹೆಸರಿನ ಬಿಳಿ ಮತ್ತು ತಿಳಿ ನೀಲಿ ಬಣ್ಣ ಹೊಂದಿರುವ ಮೊಬೈಲ್-1 ಅನ್ನು ಸ್ವಾಧೀನಪಡಿಸಿ ನಂತರ ಆತನಲ್ಲಿದ್ದ 1630/- ರೂಪಾಯಿ ಹಣವನ್ನು ಮತ್ತು ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಎಸ್.ಐ.ರಾಮಕೃಷ್ಣ ಅವರ ದೂರಿನ ಮೇರೆಗೆ ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ: 78(3) KP Actಯಂತೆ ಪ್ರಕರಣ(ಅ.ಕ್ರ.40/2026) ದಾಖಲಾಗಿರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
























