ಪುತ್ತೂರು, ಫೆಬ್ರವರಿ 18: ಪುತ್ತೂರು ಗ್ರಾಮಾಂತರ ಪೊಲೀಸರು ಅಂತರ್ ರಾಜ್ಯ ಮಾದಕ ವಸ್ತು ಮಾರಾಟ ಜಾಲವನ್ನು ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪುತ್ತೂರುದಿಂದ ಸುಳ್ಯ ಕಡೆಗೆ ಅಕ್ರಮವಾಗಿ MDMA ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಕಾರನ್ನು ತಡೆದು ಪರಿಶೀಲಿಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳು:
- ಮುಹಮ್ಮದ್ ಅಜ್ಮಲ್ ಸಿ @ ಅಜ್ಜು (30), ಕೋಝಿಕೋಡ್, ಕೇರಳ
- ಇಸ್ಮಾಯಿಲ್ (28), ವಯನಾಡ್ ಜಿಲ್ಲೆ, ಕೇರಳ
- ಸಂಶೀರ್ (27), ಕೋಝಿಕೋಡ್, ಕೇರಳ
ಪೊಲೀಸರ ಪ್ರಕಾರ, ಆರೋಪಿಗಳು ವಾಹನದಲ್ಲಿ ಮಾರಕಾಸ್ತ್ರವಾದ ತಲವಾರನ್ನು ಇಟ್ಟುಕೊಂಡಿದ್ದು, ಸುಮಾರು ₹5,38,800 ಮೌಲ್ಯದ 53.58 ಗ್ರಾಂ MDMA ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಉದ್ದೇಶದಿಂದ ವಶದಲ್ಲಿಟ್ಟುಕೊಂಡಿರುವುದು ಪತ್ತೆಯಾಗಿದೆ.
ಆರೋಪಿಗಳಿಂದ ಒಂದು ಕಾರು, ತಲವಾರು, ಮೊಬೈಲ್ ಫೋನ್‌ಗಳು ಹಾಗೂ ರೂ.10,000 ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 25/2026ರಲ್ಲಿ NDPS ಕಾಯ್ದೆ 1985ರ ಕಲಂ 8C, 22(C), 29 ಹಾಗೂ Arms Act 25(1B)(B) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ತನಿಖೆಯಲ್ಲಿ, ಆರೋಪಿಗಳು ಕೇರಳ, ಗೋವಾ ಹಾಗೂ ಕರ್ನಾಟಕ ರಾಜ್ಯಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದರೆಂಬ ಮಾಹಿತಿ ಲಭಿಸಿದೆ. ಕೇರಳ ರಾಜ್ಯದ ಕೋಝಿಕೋಡ್, ಕಣ್ಣೂರು ಮತ್ತು ವಯನಾಡ್ ಜಿಲ್ಲೆಗಳಲ್ಲಿ ಇವರ ವಿರುದ್ಧ ಈಗಾಗಲೇ ಪ್ರಕರಣಗಳು ದಾಖಲಾಗಿದ್ದು, ತಲೆಮರೆಸಿಕೊಂಡಿದ್ದರೆಂದು ತಿಳಿದು ಬಂದಿದೆ.
ಮುಖ್ಯ ಆರೋಪಿ ಮುಹಮ್ಮದ್ ಅಜ್ಮಲ್ ಸಿ @ ಅಜ್ಜು ಇತ್ತೀಚೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ. 04/2026 (NDPS Act 8C, 21(b)) ಪ್ರಕರಣದಲ್ಲಿಯೂ ಆರೋಪಿಯಾಗಿದ್ದಾನೆ. ಇಸ್ಮಾಯಿಲ್ ಮೇಲೂ ಕೇರಳ ರಾಜ್ಯದ ಕೋಝಿಕೋಡ್ ಜಿಲ್ಲೆಯಲ್ಲಿ ಮಾದಕ ವಸ್ತು ಸಾಗಾಟ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಪುತ್ತೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್ ಹಾಗೂ ವಿಶೇಷ ಪೊಲೀಸ್ ತಂಡ ಯಶಸ್ವಿಯಾಗಿ ನೆರವೇರಿಸಿದೆ.
ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.

























