ಕಡಬ: ಉದ್ಯೋಗಕ್ಕಾಗಿ ಐರ್ಲೆಂಡ್ ಗೆ ತೆರಳಿದ್ದ ಕಡಬ ತಾಲೂಕು ಕುಟ್ರುಪಾಡಿ ಗ್ರಾಮದ ವಿಮಲಗಿರಿ ನಿವಾಸಿ ನವವಿವಾಹಿತ ಯುವಕನೋರ್ವ ಅಲ್ಲಿ ತಮ್ಮ ನಿವಾಸದಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕುಟ್ರುಪಾಡಿ ವಿಮಲಗಿರಿ ನಿವಾಸಿ ಸುನೀಲ್ ಎಂಬವರ ಪುತ್ರ ಸಾಂಜೋ ಸುನಿಲ್ (31) ಮೃತಪಟ್ಟವರು. ಇವರು ಐರ್ಲೆಂಡ್ ನ ಡಬ್ಲಿನ್ ನಗರದ ಫಿಂಗ್ಲಾಸ್‌ನ ಚಾರ್ಲ್ಸ್ ಟೌನ್ ಪ್ರದೇಶದಲ್ಲಿ ವಾಸವಾಗಿದ್ದರು.
ಗುರುವಾರ ಸಾಂಜೋ ಸುನಿಲ್ ಅವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಇರಬಹುದು ಎಂದು ಶಂಕಿಸಲಾಗಿದ್ದರೂ, ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಪೊಲೀಸರು ಇದನ್ನು ಸಂಶಯಾಸ್ಪದ ಸಾವು ಎಂದು ಪರಿಗಣಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಪತಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಸಾಂಜೋ ಅವರ ಪತ್ನಿ ತೀವ್ರ ಆಘಾತಕ್ಕೊಳಗಾಗಿ ಅಸ್ವಸ್ಥಗೊಂಡಿರುವುದಾಗಿ ತಿಳಿದು ಬಂದಿದೆ.
ವರ್ಷದ ಹಿಂದೆಯಷ್ಟೆ ಸಾಂಜೋ ಸುನಿಲ್ ಅವರ ಮದುವೆಯಾಗಿತ್ತು.
ಈ ಹಿಂದೆ ಇಸ್ರೇಲ್ ನಲ್ಲಿ ಉದ್ಯೋಗದಲ್ಲಿದ್ದ ಸಾಂಜೋ ಸುನಿಲ್ ಅವರು ಮದುವೆಗಾಗಿ ಊರಿಗೆ ಬಂದವರು ತಿಂಗಳ ಹಿಂದೆಯಷ್ಟೆ ಐರ್ಲೆಂಡ್‌ಗೆ ತೆರಳಿದ್ದರು. ಕುಂತೂರು ಮೂಲದ ಪತ್ನಿ ಲಿಷ್ಠಾ ಫಿಲಿಫ್ ಐರ್ಲೆಂಡ್ ನಲ್ಲಿನರ್ಸ್ ಆಗಿ ಹಿಂದಿನಿಂದಲೂ ಕೆಲಸ ಮಾಡುತ್ತಿದ್ದರು.
ಮದುವೆಯ ಬಳಿಕ ಪತ್ನಿ ಇದ್ದಲ್ಲಿಗೆ ಸ್ಯಾಂಜೋ ಸುನಿಲ್ ಕೂಡ ತೆರಳಿದ್ದರು.
ಮೃತರು ಪತ್ನಿ, ತಂದೆ, ತಾಯಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಸಂಶಯಾಸ್ಪದ ಪ್ರಕರಣವಾಗಿದ್ದು ತನಿಖೆ ಮುಂದುವರಿದಿದೆ ಮರಣೋತ್ತರ ಪರೀಕ್ಷೆ ಫೆ.20ರಂದು ನಡೆಯಲಿದೆ. ಬಳಿಕವೇ ಮೃತದೇಹ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
























