ಪುತ್ತೂರು:ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಮತ್ತು ಅಭಿವೃದ್ಧಿಯ ಕುರಿತು ಈಗಾಗಲೇ ದೇವಸ್ಥಾನದ ರಾಜಾಂಗಣದಲ್ಲಿರುವ ನಾಲ್ಕು ಮತ್ತು ಕೆರೆಯ ಎದುರಿರುವ ಕಟ್ಟೆಯನ್ನು ತೆರವು ಮಾಡಲಾಗಿದ್ದು, ಕಂಡನಾಯಕನ ಕಟ್ಟೆಯ ತೆರವು ವೇಳೆ ದೇವರು ಆಸೀನರಾಗುವ ಪೀಠದಲ್ಲಿರುವ ತಾಮ್ರದ ಶಾಸನವೊಂದು ಬೆಳಕಿಗೆ ಬಂದಿದ್ದು,ಈ ಕಟ್ಟೆಯನ್ನು 1908ರಲ್ಲಿ ನಿರ್ಮಾಣ ಮಾಡಿರುವ ಕುರಿತು ಉಲ್ಲೇಖಿತವಾಗಿದೆ.
ಉತ್ಸವದ ಸಂದರ್ಭ ಶ್ರೀ ದೇವರು ರಾಜಾಂಗಣದಲ್ಲಿ ಕಂಡನಾಯಕನ ಕಟ್ಟೆಯಲ್ಲಿ ಕೂತು ಕಟ್ಟೆ ಪೂಜೆ ಸ್ವೀಕರಿಸಿ ಬಳಿಕ ಪೇಟೆ ಸವಾರಿ ಹೋಗುವುದು ಅಥವಾ ಇತರೆ ಉತ್ಸವದ ದಿನದಂದು ಕಟ್ಟೆಯಲ್ಲಿ ಕೂತು ಚಂದ್ರಮಂಡಲ ರಥ, ಕೆರೆ ಉತ್ಸವಕ್ಕೆ ತೆರಳುವುದು ಸಂಪ್ರದಾಯ.
ಇದೀಗ ರಾಜಾಂಗಣದ ಕಟ್ಟೆ ಗಳನ್ನು ಪುನರ್‌ನವೀಕರಣಕ್ಕೆಂದು ತೆರವು ಮಾಡುವ ವೇಳೆ ತಾಮ್ರದ ಶಾಸನವನ್ನು ಶುಚಿಗೊಳಿಸಿ ಪರಿಶೀಲಿಸಿದಾಗ 1908ನೇ ಇಸವಿಯ ಎಪ್ರಿಲ್ ತಿಂಗಳಲ್ಲಿ ಈ ಕಟ್ಟೆಯನ್ನು ಕಟ್ಟಿಸಿದ ಉಲ್ಲೇಖವಿದೆ.
ಇದೀಗ ತಾಮ್ರದ ಶಾಸನವನ್ನು ತೆಗೆದು ಇರಿಸಲಾಗಿದೆ. ಹಾಗಾಗಿ ದೇವಳದ ರಾಜಾಂಗಣದ ಕಟ್ಟೆಯಲ್ಲಿರುವ ಪ್ರತಿಯೊಂದು ಕಟ್ಟೆಗೂ ಇತಿಹಾಸವಿದೆ. 2013ರಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭ ಇತಿಹಾಸದ ಹಲವು ಕುರುಹುಗಳು ಪತ್ತೆಯಾಗಿರುವುದನ್ನು ನೆನಪಿಸಬಹುದು.


























