ಬಂಟ್ವಾಳ: ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಆತನಿಂದ 180 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಫೆಬ್ರವರಿ 19, 2026ರಂದು ಮಧ್ಯಾಹ್ನ ವೇಳೆ ಬಂಟ್ವಾಳ ತಾಲೂಕಿನ ಕೊಡ್ಮಾಣು ಗ್ರಾಮದ ಪಕ್ಕಳಪಾದೆ ಪ್ರದೇಶದ ರಸ್ತೆಯ ಬದಿಯ ನಿರ್ಜನ ಸ್ಥಳದಲ್ಲಿ ವ್ಯಕ್ತಿಯೋರ್ವ ಗಾಂಜಾ ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಿಕೊಂಡಿರುವ ಕುರಿತು ಬಂದ ಖಚಿತ ಮಾಹಿತಿ ಮೇರೆಗೆ, ಮಂಜುನಾಥ ಟಿ., ಪೊಲೀಸ್ ಉಪ ನಿರೀಕ್ಷಕರು (ಕಾ&ಸು) ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ, ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದರು.
ದಾಳಿ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತನು ಬಂಟ್ವಾಳ ಮೇರಮಜಲು ನಿವಾಸಿ ಪ್ರಶಾಂತ್ @ ಪ್ರಸಾದ್ (30) ಎಂದು ತಿಳಿದುಬಂದಿದೆ. ತಪಾಸಣೆಯ ವೇಳೆ ಆತನ ಬಳಿ 180 ಗ್ರಾಂ ಗಾಂಜಾ ಪತ್ತೆಯಾಗಿದೆ. ಗಿರಾಕಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾವನ್ನು ಸಂಗ್ರಹಿಸಿಕೊಂಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ಪ್ರಾಥಮಿಕ ವಿಚಾರಣೆಯಲ್ಲಿ, ಬಂಟ್ವಾಳದ ಪಲ್ಲಮಜಲು ನಿವಾಸಿ ಅಬ್ದುಲ್ ರಜಾಕ್ ಎಂಬುವರು ಗಾಂಜಾವನ್ನು ಮಾರಾಟ ಮಾಡಲು ನೀಡಿರುವುದಾಗಿ ಆರೋಪಿತನು ತಿಳಿಸಿದ್ದಾನೆ.
ಬಂಧಿತನನ್ನು ಮಾದಕ ವಸ್ತು ಹಾಗೂ ಆತನ ಬಳಿಯಿದ್ದ ದ್ವಿಚಕ್ರ ವಾಹನ ಸಮೇತ ವಶಪಡಿಸಿಕೊಂಡು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 19/2026ರಂತೆ, ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 8(C) r/w 20(b)(ii)(A) ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.


























