ಸುಳ್ಯ ಸಮೀಪದ ಬೊಳುಬೈಲಿನಲ್ಲಿ ಎದುರಿನಿಂದ ಹೋಗುತಿದ್ದ ಕಾರಿಗೆ ಹಿಂಬದಿಯಿಂದ ಅಮಲು ಸೇವಿಸಿ ಡ್ರೈವ್ ಮಾಡಿಕೊಂಡು ಬಂದ ಕಾರು ಚಾಲಕ ನಿಯಂತ್ರಣ ಕಳೆದು ಗುದ್ದಿದ ಪರಿಣಾಮ ಎದುರು ಕಾರಿನಲ್ಲಿದ್ದ ಐವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತ ನಡೆಸಿದ ಚಾಲಕನನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸುಳ್ಯ ಜಯನಗರದ ಕುಕ್ಕೆಶ್ರೀ ವಸಂತ ಎಂಬವರು ಪತ್ನಿ, ಮಕ್ಕಳೊಂದಿಗೆ ಮಡಂತ್ಯಾರಿಗೆ ಕಾರಿನಲ್ಲಿ ಹೋಗುತಿದ್ದರು. ಈ ವೇಳೆ ಅವರ ಹಿಂಬದಿಯಿಂದ ಕಾರು ಚಲಾಯಿಸಿಕೊಂಡು ಬರುತ್ತಿದ್ದ ಪೇರಾಲು ಉದ್ದಂತಡ್ಕ ಮಂಜುನಾಥ್ ಎಂಬವರು ಚಲಾಯಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನ ಕಾರಿಗೆ ಗುದ್ದಿತು. ಪಕ್ಕದ ವಿದ್ಯುತ್ ಕಂಬಕ್ಕೂ ಕಾರು ಗುದ್ದಿದೆ.
ಪರಿಣಾಮ ಕುಕ್ಕೆಶ್ರೀ ವಸಂತ ಹಾಗೂ ಅವರ ಕಾರಿನಲ್ಲಿದ್ದವರು ಗಾಯಗೊಂಡರು. ಅವರನ್ನು ಸ್ಥಳೀಯರು ಸುಳ್ಯಸರಕಾರಿ ಆಸ್ಪತ್ರೆಗೆ ದಾಖಲಿಸಿದರು.
ಅಪಘಾತ ನಡೆಸಿದ ಮಂಜುನಾಥ್ ಅಮಲು ಸೇವಿಸಿದ್ದು ತಾನು ಏನು ಮಾತನಾಡುತಿದ್ದೇನೆ ಎಂದು ಗೊತ್ತಾಗದಷ್ಟು ಅಮಲು ಸೇವಿಸಿದ್ದರು. ಸೇರಿದ ಜನರು ಮಂಜುನಾಥ್ ರನ್ನು ಕಾರಿನಿಂದ ಇಳಿಯಲು ಬಿಡಲಿಲ್ಲ. ಬಳಿಕ ಪೋಲೀಸರು ಬಂದ ಬಳಿಕ ಮಂಜುನಾಥ್ ಹಾಗೂ ಕಾರಿನ ಹಿಂಬದಿ ಕುಳಿತಿದ್ದ ಜಯರಾಮ ಎಂಬಾತನನ್ನು ವಶಕ್ಕೆ ಪಡೆದರು.


























