ಮಂಗಳೂರು : ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 34 ಜಾನುವಾರುಗಳನ್ನು ಮಂಗಳೂರಿನ ಕದ್ರಿ ಠಾಣೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ಜಾನುವಾರು ಸಾಗಾಟ ಬಗ್ಗೆ ಖಚಿತ ಮಾಹಿತಿ ಮೇರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರ್ಯಾಚರಣೆ ನಡೆಸಿರುವ ಖಾಕಿ ತಂಡ ಜಾಲವನ್ನು ಭೇದಿಸಿದೆ. ಜಾನುವಾರುಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಈ ವೇಳೆ ಕಂಡುಬಂದಿದ್ದು, ಕೇರಳದ ಕಸಾಯಿಖಾನೆಗೆ ಇವುಗಳನ್ನು ಸಾಗಿಸಲಾಗುತ್ತಿತ್ತು. ಪ್ರಕರಣ ಸಂಬಂಧ ದಸ್ತಗೀರ್ ಸಾಬ್, ಖತಿಪ್ ಪಾಷಾ ಮತ್ತು ಅಯೂಬ್ ಖಾನ್ ಎಂಬವರನ್ನು ಬಂಧಿಸಲಾಗಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಿಂದ ಆರೋಪಿಗಳು ಜಾನುವಾರು ತಂದಿದ್ದರು ಎನ್ನಲಾಗಿದ್ದು, ಬಂಧಿತರ ವಿಚಾರಣೆ ತೀವ್ರಗೊಂಡಿದೆ. ಶಿರಾಳಕೊಪ್ಪದ ಒಂದೇ ಕಡೆಯಿಂದ ಜಾನುವಾರು ತಂದಿರುವುದಾಗಿ ಆರೋಪಿಗಳು ಹೇಳುತ್ತಿದ್ದರೂ, ಬೇರೆ ಬೇರೆ ಕಡೆ ರೈತರಿಂದ ಜಾನುವಾರು ಖರೀದಿಸಿ ಸಾಗಾಟ ಮಾಡುತ್ತಿದ್ದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಬಂಧಿತ ಮೂವರೂ ಸಹ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮೂಲದವರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.


























