ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿ ಈಗಾಗಲೇ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದ್ದು ಕೆಲವು ಕಾಮಗಾರಿಗಳು ಆರಂಭಗೊಂಡಿದೆ.
ಇದೀಗ ಶಾಸಕರ ಕನಸಿನಂತೆ, ಮುಖ್ಯರಸ್ತೆಯಿಂದ ಸ್ಮಶಾನದ ತನಕ ರಸ್ತೆ ನಿರ್ಮಾಣಕ್ಕೆ ಪೂರಕವಾಗಿ ತೋಡಿಗೆ ತಡೆಗೋಡೆ ನಿರ್ಮಾಣ ಹಿನ್ನಲೆಯಲ್ಲಿ ಅಲ್ಲಿದ್ದ ಶೌಚಾಲಯವನ್ನು ತೆರವುಗೊಳಿಸಲಾಗಿದೆ.
ಭಕ್ತರಿಗೆ ಬದಲಿ ಶೌಚಾಲಯದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಫೆ.21ರಂದು ದೇವಳದ ರಾಜಾಂಗಣದಲ್ಲಿರುವ 5 ಕಟ್ಟೆಗಳ ಪುನರ್‌ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಅಯ್ಯಪ್ಪ ಗುಡಿ ಸಹಿತ ಇತರ ಅಭಿವೃದ್ಧಿ ಕಾರ್ಯಗಳಿಗೆ ಗುದ್ದಲಿ ಪೂಜೆ ಮಾಡಲಾಯಿತು.
ಈ ಕಾರ್ಯಕ್ರಮದ ಸಮಾರಂಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಭಾಷಣದಲ್ಲಿ, ಮುಖ್ಯ ರಸ್ತೆಯಿಂದ ದೇವಸ್ಥಾನದ ಬದಿಯಿಂದ ಸ್ಮಶಾನದ ತನಕ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಜಾಗವನ್ನೂ ಖರೀದಿ ಮಾಡಿರುವ ಕುರಿತು ಉಲ್ಲೇಖಿಸಿದ್ದರು. ಇದೀಗ
ರಸ್ತೆ ನಿರ್ಮಾಣದ ಮೊದಲ ಹಂತವಾಗಿ ದೇವಳದ ಅನ್ನಛತ್ರದ ಬಳಿ ಇರುವ ತೋಡಿಗೆ ತಡೆಗೋಡೆ ನಿರ್ಮಾಣ ಮಾಡಲು ತೋಡಿನ ಬದಿಯಲ್ಲಿರುವ ಶೌಚಾಲಯವನ್ನು ತೆರವು ಮಾಡಲಾಗಿದೆ.
ದೇವಳಕ್ಕೆ ಬರುವ ಭಕ್ತರಿಗೆ ಶೌಚಾಲಯದ ಬದಲಿ ವ್ಯವಸ್ಥೆಯಾಗಿ ದೇವಳದ ಸಭಾಭವನದ ಬಳಿಯ ಶೌಚಾಲಯಕ್ಕೆ ತೆರಳುವಂತೆ, ಶೌಚಾಲಯ ತೆರವಾದ ಜಾಗದಲ್ಲಿ ಫಲಕ ಅಳವಡಿಸಲಾಗಿದೆ. ದೇವಳದ ಅಭಿವೃದ್ಧಿ ಕಾರ್ಯಗಳಿಗೆ ಇದೀಗ ಇನ್ನಷ್ಟು ವೇಗ ಸಿಕ್ಕಿದೆ.


























