ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಗದ್ದೆಗೆ ಉರುಳಿ ಬಿದ್ದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ತಾಯಿ-ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪ್ಪಂಗಳ ನಿವಾಸಿ ಸಾಗರ್ ಎಂಬುವವರು ಮಡಿಕೇರಿ ಮಾರ್ಗದಿಂದ ಬರುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿದೆ. ಬೆಟ್ಟಗೇರಿ – ಮಡಿಕೇರಿ ಮುಖ್ಯರಸ್ತೆಯ ಹಂಪ್ಸ್ ಬಳಿಯ ರಸ್ತೆ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ರಸ್ತೆ ಬದಿಯ 20 ಅಡಿ ಆಳದ ಗದ್ದೆಗೆ ಕಾರು ಉರುಳಿ ಬಿದ್ದು ಸಂಪೂರ್ಣ ಜಂಗೊಂಡಿದೆ.
ಕಾರಿನಲ್ಲಿದ್ದ ಚಾಲಕ ಸಾಗರ್ ಹಾಗೂ ಅವ್ರ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನೊಳಗೆ ಸಿಲುಕಿದ್ದ ತಾಯಿ ಮತ್ತು ಮಗನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























