ಮಂಗಳೂರು, ಫೆ. 26: ಮಂಗಳೂರು ನಗರದ ಬಾಬುಗೆಡ್ಡೆಯ ಗ್ರಾಮದ ಸಮೀಪದ ರೈಲ್ವೆ ಟ್ರಾಕ್ ಬಳಿ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಆರೋಪದ ಮೇಲೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಪೊಲೀಸ್ ಮಾಹಿತಿಯ ಪ್ರಕಾರ, ವ್ಯಕ್ತಿಯೋರ್ವರ 14 ವರ್ಷದ ಮಗ ಫೆಬ್ರವರಿ 23ರಂದು ಸಂಜೆ ಸುಮಾರು 4 ಗಂಟೆಯ ವೇಳೆ ತನ್ನ ಸ್ನೇಹಿತೆ ಜೊತೆ ರೈಲ್ವೆ ಟ್ರಾಕ್ ಬಳಿ ಕುಳಿತು ಮಾತನಾಡುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಆರೋಪಿ ಸ್ಟೀವನ್ ಮೊಂತೆರೋ ಅವರು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ವಿಡಿಯೋ ಚಿತ್ರೀಕರಣ ಮಾಡುತ್ತಾ, ತನ್ನ ಮಗ ಅವಿಲ್ ಜೊತೆ ಅಲ್ಲಿಗೆ ಬಂದಿದ್ದಾರೆ ಎನ್ನಲಾಗಿದೆ.
“ನೀವಿಲ್ಲಿ ಕಿಸ್ ಮಾಡುತ್ತಿದ್ದೀರಾ? ನಾನು ರೆಕಾರ್ಡಿಂಗ್ ಮಾಡುತ್ತಿದ್ದೇನೆ, ಫೇಸ್‌ಬುಕ್‌ನಲ್ಲಿ ಹಾಕುತ್ತೇನೆ” ಎಂದು ಆರೋಪಿಯು ಹೇಳಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಳಿಕ ಬಾಲಕಿ ಅಲ್ಲಿಂದ ತೆರಳಿದ್ದು,ಅಪ್ರಾಪ್ತ ಸ್ಥಳದಿಂದ ಹೊರಟಾಗ ಅವಿಲ್ ಎಂಬಾತ ಅವನನ್ನು ತಡೆದು ರೈಲ್ವೆ ಟ್ರಾಕ್‌ನಿಂದ ಪಕ್ಕದ ರಸ್ತೆಗೆ ಕರೆದುಕೊಂಡು ಹೋಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಇದಲ್ಲದೆ, ಸ್ಟೀವನ್ ಮೊಂತೆರೋ ಅವರು ಸಾರ್ವಜನಿಕವಾಗಿ ಬೆದರಿಕೆ ಹಾಕಿ, ಮತ್ತೊಮ್ಮೆ ಇಲ್ಲಿ ಕಂಡರೆ ಕೈಕಾಲು ಮುರಿಯುವುದಾಗಿ ಬೆದರಿಕೆ ಒಡ್ಡಿದ್ದಾಗಿ ಆರೋಪಿಸಲಾಗಿದೆ. ಇದೇ ವೇಳೆ ಜಾತಿ ವಿಚಾರ ಪ್ರಸ್ತಾಪಿಸಿ ನಿಂದನೆ ಮಾಡಿರುವುದಾಗಿ ಕೂಡ ದೂರಿನಲ್ಲಿ ಹೇಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಚಿತ್ರೀಕರಿಸಿದ ವಿಡಿಯೋವನ್ನು ವಾಟ್ಸಾಪ್‌ನಲ್ಲಿ ವೈರಲ್ ಮಾಡಿರುವ ಆರೋಪವೂ ಕೇಳಿಬಂದಿದೆ.
ಈ ಕುರಿತು ಸಂಬಂಧಿತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
























