ಪುತ್ತೂರು:ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿ ನೆಲ್ಲಿಕಟ್ಟೆಯಲ್ಲಿದ್ದ ಸುಮಾರು 1.20 ಕೋಟಿ ರೂ.ಮೌಲ್ಯದ 8 ಸೆಂಟ್ಸ್ ಜಾಗವನ್ನು ಫೆ.28ರಂದು ದೇವಳದ ಸ್ವಾಧೀನಕ್ಕೆ ಪಡೆಯಲಾಗಿದೆ.
ನೆಲ್ಲಿಕಟ್ಟೆಯಲ್ಲಿರುವ ಅಶ್ವತ್ಥಕಟ್ಟೆಯ ಹಿಂಬದಿಯಲ್ಲಿ ವಾಲ್ಟರ್ ಲೋಬೋ ಎಂಬವರ ಸ್ವಾಧೀನದಲ್ಲಿದ್ದ ದೇವಳಕ್ಕೆ ಸಂಬಂಧಿಸಿದ 8 ಸೆಂಟ್ಸ್ ಜಾಗ ಮತ್ತು ಅದರಲ್ಲಿದ್ದ ಹಂಚಿನ ಮನೆಯೊಂದನ್ನು ದೇವಳಕ್ಕೆ ವಾಪಸ್ ನೀಡುವಂತೆ ಮನವಿ ಮಾಡಲಾಗಿತ್ತು.
ಅದರಂತೆ,ಒತ್ತುವರಿ ಮಾಡಿಕೊಂಡವರು ಜಾಗವನ್ನು ದೇವಳಕ್ಕೆ ಹಸ್ತಾಂತರಿಸಿದರು. ಹಂಚಿನ ಮನೆಯಲ್ಲಿ ನಾಲೈದು ಬಾಡಿಗೆ ಕೊಠಡಿಗಳಿದ್ದು ಅವೆಲ್ಲವನ್ನು ತೆರವು ಮಾಡಿ ಕಟ್ಟಡವನ್ನು ಧ್ವಂಸ ಮಾಡಿ ಜಮೀನಿನಲ್ಲಿ ದೇವಸ್ಥಾನದ ಜಾಗವೆಂದು ಫಲಕ ಅಳವಡಿಸಲಾಗಿದೆ.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ,ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿನಯ ಸುವರ್ಣ, ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್‌ನ ವಲಯ ಅಧ್ಯಕ್ಷ ಲೋಕೇಶ್ ಪಡ್ಡಾಯೂರು, ರೋಹನ್‌ರಾಜ್ ಮತ್ತಿತರರು ಉಪಸ್ಥಿತರಿದ್ದರು.


























