ಕಡಬ: ವೈಯಕ್ತಿಕ ಕಾರಣಗಳಿಂದಾಗಿ ಮನನೊಂದು ನರ್ಸಿಂಗ್ ವಿದ್ಯಾರ್ಥಿನಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಲಾರೆನ್ಸ್ ಎಂಬವರ ಪುತ್ರಿ ಸ್ವೀಟಿ (18 ವ.) ಮೃತಪಟ್ಟವರು. ಉಡುಪಿಯ ಖಾಸಗಿ ಕಾಲೇಜೊಂದರಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಇವರು ಕಾಲೇಜಿನ ವಸತಿ ನಿಲಯದಲ್ಲೇ ವಾಸ್ತವ್ಯವಿದ್ದರು. ಫೆಬ್ರವರಿ 25ರಂದು ರಾತ್ರಿ ತರಗತಿ ಮುಗಿಸಿ ವಸತಿ ನಿಲಯಕ್ಕೆ ಮರಳಿದ್ದ ಸ್ವೀಟಿ, ಅಲ್ಲಿಯೇ ಇಲಿ ಪಾಷಣ (Rat Poison) ಸೇವಿಸಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸಹಪಾಠಿಗಳು ಮತ್ತು ಕಾಲೇಜು ಮಂಡಳಿಯವರು ತಕ್ಷಣವೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಸಾವು: ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.



























