ಪುತ್ತೂರು: ಇಲ್ಲಿನ ಪ್ರೌಢಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಪ್ರಾಪ್ತ ಪ್ರಾಯದ ತನ್ನ ಸಹೋದರನಿಗೆ ಅಪರಿಚಿತ ವ್ಯಕ್ತಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಬಂಟ್ವಾಳದ ಶರತ್ ಎಂಬವರು ನೀಡಿದ್ದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನ್ನ ತಮ್ಮ, ಬಂಟ್ವಾಳ ತಾಲೂಕು ವಾಮದಪದವಿನಲ್ಲಿರುವ ಹೊಟೇಲ್‌ನಲ್ಲಿ ತನ್ನ ಗೆಳೆಯರೊಂದಿಗೆ ತಿಂಡಿ ತಿನ್ನುತ್ತಿದ್ದಾಗ, ಪಕ್ಕದ ಟೇಬಲ್‌ನಲ್ಲಿದ್ದ ಅಪರಿಚಿತ ವ್ಯಕ್ತಿಯೋರ್ವ ವಿನಾ ಕಾರಣ ತಮ್ಮನೊಂದಿಗೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುತ್ತಾನೆ.
ತಮ್ಮನೊಂದಿಗಿದ್ದ ಗೆಳೆಯ ನನಗೆ ಕರೆ ಮಾಡಿ ಮಾಹಿತಿಯನ್ನು ತಿಳಿಸಿದ್ದು ನಾನು ಸ್ಥಳಕ್ಕೆ ಬಂದಾಗ ಆರೋಪಿ ಅಲ್ಲಿ ಇರಲಿಲ್ಲ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.


























