ಬಳ್ಳಾರಿ: ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಓರ್ವ ಬಾಲಕ ಮೃತಪಟ್ಟಿರುವ ಘಟನೆ ಬಳ್ಳಾರಿಯ ಖಾಸಗಿ ಶಾಲೆಗೆ ಸೇರಿದ ಹಾಸ್ಟೆಲ್ನಲ್ಲಿ ನಡೆದಿದೆ.
ಹಾಸ್ಟೆಲ್ನ ವಾರ್ಡನ್ ಸೇರಿ ಹಲವು ಬಾಲಕರ ಮೇಲೆ 9ನೇ ತರಗತಿ ವಿದ್ಯಾರ್ಥಿ ರಾಡ್ನಿಂದ ಹಲ್ಲೆ ನಡೆಸಿದ ಪರಿಣಾಮ ಓರ್ವ ಪ್ರಾಣಬಿಟ್ಟಿದ್ದರೆ, ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಲ್ಲೆ ನಡೆಸಿ ಬಾಲಕ ಪರಾರಿಯಾಗಿದ್ದು, ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಘಟನೆಯಲ್ಲಿ ಮೃತ ಬಾಲಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ರಾಡ್ನಿಂದ ಹೊಡೆದಿದ್ದಾನೆ ಎಂದು ಶಾಲಾ ಆಡಳಿತ ಮಂಡಳಿ ಹೇಳ್ತಿದೆ. ಆದರೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಅನುಮಾನ ಇದೆ. ಹಲ್ಲೆ ನಡೆಸಿರುವ ವಿದ್ಯಾರ್ಥಿ ಡ್ರಗ್ ಅಡಿಕ್ಟ್ ಆಗಿರುವ ಶಂಕೆ ಇದ್ದು, ಇಷ್ಟೆಲ್ಲ ಹುಡುಗರ ಮೇಲೆ ಆತ ಒಬ್ಬನೇ ಹಲ್ಲೆ ಮಾಡೋದಕ್ಕೆ ಹೇಗೆ ಸಾಧ್ಯ? ಇದಕ್ಕೆಲ್ಲಾ ಶಾಲಾ ಆಡಳಿತ ಮಂಡಳಿಯೇ ನೇರ ಹೊಣೆ ಎಂದು ಮೃತ ವಿದ್ಯಾರ್ಥಿ ಪೋಷಕರು ಆರೋಪಿಸಿದ್ದಾರೆ.
ಈ ಹಿಂದೆ ಹಾಸ್ಟೆಲ್ನಲ್ಲಿ ಈ ರೀತಿಯ ಯಾವುದೇ ಘಟನೆ ನಡೆದಿರಲಿಲ್ಲ. ಹಲ್ಲೆ ನಡೆದಿರೋದು ಕೇವಲ ಒಬ್ಬರ ಮೇಲಲ್ಲ. ಹಲವರ ಮೇಲೆ ಬಾಲಕ ಹಲ್ಲೆ ನಡೆಸಿದ್ದಾನೆ.
ಹೀಗಾಗಿ ಆತನಿಗೆ ಏನಾದರೂ ಮಾನಸಿಕ ಸಮಸ್ಯೆಗಳಿತ್ತಾ? ಅಥವಾ ಅವನ್ನು ಮಾದಕ ವಸ್ತುಗಳಿಗೆ ಎಡಿಕ್ಟ್ ಆಗಿದ್ದನಾ ಎನ್ನುವ ಬಗ್ಗೆಯೂ ಪ್ರಶ್ನೆಗಳೆದ್ದಿವೆ. ಹಾಸ್ಟೆಲ್ ಆಡಳಿತ ಮಂಡಳಿ ನಂಬಿ ಮಕ್ಕಳನ್ನು ಬಿಟ್ಟಿದ್ದೇವೆ. ಆದರೆ ಅವರ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ. ಅಸಲಿಗೆ ಬಾಲಕರ ನಡುವೆ ಏನಾಗಿದೆ ಎನ್ನುವುದೇ ಗೊತ್ತಿಲ್ಲ. ರಾತ್ರಿ ನಮಗೆ ದೂರವಾಣಿ ಕರೆ ಬಂದ ಹಿನ್ನೆಲೆ ಇಲ್ಲಿಗೆ ಬಂದು ನೋಡಿದಾಗ ಕೊಲೆ ನಡೆದಿರೋದು ಗೊತ್ತಾಗಿದೆ, ವಿದ್ಯಾರ್ಥಿ ಕೈಗೆ ಮಾರಕಾಸ್ತ್ರ ಸಿಕ್ಕಿದ್ದಾದರೂ ಹೇಗೆ ಎಂದು ಪೋಷಕರು ಪ್ರಶ್ನಿಸಿದ್ದಾರೆ.


























