ಪುತ್ತೂರು:ಕಾರ್ಯಕ್ರಮಗಳಿಗೆ ಸಮಯದ ಮಿತಿ ವಿಚಾರದಲ್ಲಿ ಪೊಲೀಸರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ನೆಲ್ಲಿಕಟ್ಟೆ ಮಿತ್ರ ಮಂಡಲದ ಪದಾಧಿಕಾರಿಗಳ ಸಭೆಯಲ್ಲಿ ಆರೋಪ ವ್ಯಕ್ತವಾಯಿತು.
ನೆಲ್ಲಿಕಟ್ಟೆ ಮಿತ್ರ ಮಂಡಲದ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ಮಿತ್ರ ಮಂಡಲದ ಪದಾಧಿಕಾರಿಗಳ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ ಪೊಲೀಸರ ಕ್ರಮಕ್ಕೆ ಖಂಡನೆ ವ್ಯಕ್ತವಾಯಿತು.ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ನೆಲ್ಲಿಕಟ್ಟೆ ಮಿತ್ರ ಮಂಡಲದ 50ನೇ ವಾರ್ಷಿಕ ಸಂಭ್ರಮ ಆಚರಣೆ ಕಾರ್ಯಕ್ರಮದಲ್ಲಿ, ಸಮಯದ ಮಿತಿ ನೆಪವೊಡ್ಡಿ ಪೊಲೀಸರು ರಾತ್ರಿ 10.30ರ ಒಳಗೆ ಕಾರ್ಯಕ್ರಮವನ್ನು ನಿಲ್ಲಿಸಿ,ನಿಗದಿಪಡಿಸಿದ ಮನರಂಜನಾ ಕಾರ್ಯಕ್ರಮಗಳನ್ನು ಮಾಡಲು ಅವಕಾಶ ನೀಡದೆ ಸೇರಿದ ಸಮಸ್ತ ಜನರಿಗೆ ನೋವುಂಟು ಮಾಡಿರುತ್ತಾರೆ.ಆದರೆ ಆ ಬಳಿಕ ಕೆಲವೊಂದು ಕಾರ್ಯಕ್ರಮಗಳಿಗೆ ರಾತ್ರಿ ಇಡೀ ಪೊಲೀಸರು ಅವಕಾಶ ನೀಡಿದ್ದಾರೆ ಎಂದು ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ, ಪೊಲೀಸರ ಕ್ರಮಕ್ಕೆ ಖಂಡನೆ ವ್ಯಕ್ತಪಡಿಸಲಾಯಿತು.
ಫೆ.1ರಂದು ನೆಲ್ಲಿಕಟ್ಟೆ ಮಿತ್ರ ಮಂಡಲದ ಸುವರ್ಣ ಸಂಭ್ರಮ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು.ಪ್ರಸ್ತುತ ತಾಪಮಾನ ಹೆಚ್ಚಿರುವುದರಿಂದ ಸಂಜೆ ಕಾರ್ಯಕ್ರಮವನ್ನು ಮಾಡಲು ಅನಾನುಕೂಲ ಕಾರಣಕ್ಕಾಗಿ ರಾತ್ರಿ ಸಮಯದಲ್ಲಿ ಪ್ರಾರಂಭಿಸಿ,ಸಭಾ ಕಾರ್ಯಕ್ರಮ ಹಾಗೂ ಮನೋರಂಜನಾ ಕಾರ್ಯಕ್ರಮವಾಗಿ ರಸಮಂಜರಿಯನ್ನು ಆಯೋಜಿಸಿದ್ದೆವು.
ಕಾರ್ಯಕ್ರಮ ನೋಡಲೆಂದು ಹೆಚ್ಚಿನ ಸಂಖ್ಯೆಯಲ್ಲಿ ಜನರೂ ಸೇರಿದ್ದರು. ಆದರೆ ಪೊಲೀಸ್ ಇಲಾಖೆಯ ಕೆಲ ಕಾನೂನು ಅಡೆತಡೆಗಳಿಂದಾಗಿ ಸಮಸ್ಯೆಯಾಗಿದೆ.
ಕಾರ್ಯಕ್ರಮವನ್ನು ರಾತ್ರಿ 10:30ಕ್ಕೆ ನಿಲ್ಲಿಸುವಂತೆ ನಮ್ಮ ಎಲ್ಲ ಸದಸ್ಯರಿಗೆ ಒತ್ತಡವನ್ನು ಹೇರಿ ಕಾರ್ಯಕ್ರಮವನ್ನು ಪೊಲೀಸರು ನಿಲ್ಲಿಸಿರುತ್ತಾರೆ. ಈ ಬಗ್ಗೆ ಯಾವುದೇ ಮಾತನ್ನಾಡಲು ನಮಗೆ ಅವಕಾಶವನ್ನೂ ಕೊಡದೆ ಕಾರ್ಯಕ್ರಮವನ್ನು ನಿಲ್ಲಿಸಿ ನಮಗೆಲ್ಲರಿಗೂ ತುಂಬಾ ನೋವುಂಟು ಮಾಡಿರುತ್ತಾರೆ ಎಂದು ಹೇಳಿದ ಪದಾಧಿಕಾರಿಗಳು,ಪುತ್ತೂರು ತಾಲೂಕಿನಲ್ಲಿ ವಿವಿಧ ಕಡೆಗಳಲ್ಲಿ ಸಮಯ ಮೀರಿ ಹಲವು ಕಾರ್ಯಕ್ರಮಗಳು ಆಗಿರುತ್ತದೆ, ಮೊನ್ನೆ ಉಪ್ಪಿನಂಗಡಿಯಲ್ಲಿ `ಉಬರ್ ಉತ್ಸವ ತಡ ರಾತ್ರಿಯವರೆಗೂ ನಡೆದಿರುತ್ತದೆ. ಹಾಗಾದರೆ ಅದಕ್ಕೆಲ್ಲಾ ಕಾನೂನು ಅನ್ವಯ ಆಗುವುದಿಲ್ಲವೇ? ಕೇವಲ ನೆಲ್ಲಿಕಟ್ಟೆ ವಿತ್ರಮಂಡಲವನ್ನು ಮಾತ್ರ ಟಾರ್ಗೆಟ್ ಮಾಡುವ ಮುಖಾಂತರ, ಎಲ್ಲರಿಗೂ ಅನ್ವಯಿಸಬೇಕಾದ ಕಾನೂನನ್ನು ನೆಲ್ಲಿಕಟ್ಟಿಗೆ ಮಾತ್ರ ವಿಧಿಸಿರುವುದು ನೆಲ್ಲಿಕಟ್ಟೆ ಮಿತ್ರಮಂಡಲದ ಸದಸ್ಯರು ನೋವು ಉಂಟಾಗಿರುತ್ತದೆ.
ಇದನ್ನು ಮೇಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಈ ರೀತಿಯ ತಾರತಮ್ಯಕ್ಕೆ ಕಾರಣವಾದ ಅಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.
ಮಾಜಿ ಪುರಸಭಾಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ನಗರಸಭೆಯ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಜನಾರ್ದನ ರಾವ್, ಸಂದೀಪ್ ನೆಲ್ಲಿಕಟ್ಟೆ, ರೋಹಿತ್ ನೆಲ್ಲಿಕಟ್ಟೆ, ದೇವಿಪ್ರಸಾದ್ ಶೆಟ್ಟಿ,ಶಶಿಕಾಂತ್ ರಾವ್,ಜಗನ್ನಾಥ್ ಜೋಗಿ,ಬಾಲಕೃಷ್ಣ ನಾಯ್, ನಿಖಿಲ್ ನಾಯ್, ಅಶ್ರ- ಕಲ್ಲೇರಿ, ವಿಲಿಯಂ, ಅಭಿಲಾಷ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

























