ಉಳ್ಳಾಲ ಮಾರ್ಚ್ 11: ಸೋಮವಾರ ನಾಪತ್ತೆಯಾಗಿದ್ದ ಯುವಕನ ಮೃತದೇಹ ಸೋಮೇಶ್ವರದ ಸೋಮನಾಥ ಕ್ಷೇತ್ರದ ಗದಾತೀರ್ಥ ಕೆರೆಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಉಳ್ಳಾಲ ತಾಲೂಕಿನ ಕೊಣಾಜೆಯ ಮುಚ್ಚಿಲ ಕೋಡಿಯ ನಿವಾಸಿ ದಿನೇಶ್ ಶೆಟ್ಟಿಗಾರ್ ಎಂಬವರ ಪುತ್ರ ವಿವೇಕ್ ಶೆಟ್ಟಿಗಾರ್ ( 32)ಮೃತ ಯುವಕನಾಗಿದ್ದಾನೆ.
ಮಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ವಿವೇಕ್ ಸೋಮವಾರ ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ತೆರಳಿದ್ದರು. ಅಂದು ರಾತ್ರಿ 9 ಗಂಟೆಯ ಸುಮಾರಿಗೆ ತಾಯಿಗೆ ಫೋನ್ ಮಾಡಿ ದೇವಸ್ಥಾನಕ್ಕೆ ತೆರಳುವುದಾಗಿ ತಿಳಿಸಿದ್ದರೆನ್ನಲಾಗಿದೆ.
ಮಧ್ಯರಾತ್ರಿ 12 ಗಂಟೆಯಾದರೂ ಮಗ ಮನೆಗೆ ವಾಪಸ್ಸು ಬರದೇ ಇದ್ದ ಕಾರಣ ತಾಯಿ ಪೋನ್ ಮಾಡಿದ್ದು,ವಿವೇಕ್ ಕರೆಯನ್ನ ಸ್ವೀಕರಿಸಿರಲಿಲ್ಲ. ವಿವೇಕ್ ಮಂಗಳವಾರವೂ ಮನೆಗೂ ಬಾರದೆ, ಮೊಬೈಲ್ ಕರೆಯನ್ನು ಸ್ವೀಕರಿಸದೇ ಇದ್ದಾಗ ಗಾಬರಿಗೊಂಡ ಮನೆಯವರು ಎಲ್ಲಾ ಕಡೆ ಹುಡುಕಾಡಿದ್ದು, ಕೊನೆಗೆ ಕೊಣಾಜೆ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಬುಧವಾರ ಸೋಮೇಶ್ವರ ಕೆರೆಯಲ್ಲಿ ವಿವೇಕ್ ಶೆಟ್ಟಿಗಾರ್ ಅವರ ಮೃತದೇಹ ಪತ್ತೆಯಾಗಿದ್ದು, ವಿವೇಕ್ ತಮ್ಮ ಸ್ಕೂಟರನ್ನು ಸೋಮೇಶ್ವರ ರಥದ ಕೊಠಡಿ ಸಮೀಪ ನಿಲ್ಲಿಸಿದ್ದು ಕಂಡುಬಂದಿದೆ. ಅಲ್ಲಿಯೇ ಅವರ ಮೊಬೈಲ್ ಫೋನ್ ಹಾಗೂ ಚಪ್ಪಲಿಗಳನ್ನು ಇಟ್ಟು ಅವರು ಕಾಣೆಯಾಗಿರುವುದು ತಿಳಿದುಬಂದಿದೆ.
ವಿವೇಕ್ ಶೆಟ್ಟಿಗಾರ್ ಅವರು ಸುಮಾರು 8 ತಿಂಗಳ ಹಿಂದೆ ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದರು. ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣ ದಾಖಲಾಗಿದೆ.


























