ಬಂಟ್ವಾಳ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ ಸುಮಾರು ರೂ.1,79,700 ಮೌಲ್ಯದ MDMA ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ.
ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ, ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಭಗವಂತ ಕೋಡಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅಶ್ರಫ್ ಜಿ (38) ಎಂಬಾತನು ತನ್ನ ಮನೆಯಲ್ಲಿ ಮಾದಕ ವಸ್ತುವಾದ MDMA ಸಂಗ್ರಹಿಸಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಲಭಿಸಿತು.
ಈ ಮಾಹಿತಿ ಆಧಾರಿಸಿ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ತನಿಖೆ-1) ರತ್ನಕುಮಾರ್ ಎಂ ಅವರು ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದರು. ಈ ವೇಳೆ ಅಶ್ರಫ್ ಜಿ ತನ್ನ ಮನೆಯಲ್ಲಿ ಹಫೀಝ್ ಯಾನೆ ಅಪ್ಪಿ, ಅಫ್ವಾನ್ ಮತ್ತು ಅಶ್ರಫ್ ಎನ್.ಎ ಅವರೊಂದಿಗೆ ಇದ್ದನು.
ಮನೆಯನ್ನು ಪರಿಶೀಲಿಸಿದಾಗ ಸುಮಾರು 17.97 ಗ್ರಾಂ ತೂಕದ, ರೂ.1,79,700 ಅಂದಾಜು ಮೌಲ್ಯದ MDMA ಮಾದಕ ವಸ್ತು, ಒಂದು ಚೂರಿ ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿದ್ದು, ಪೊಲೀಸರು ಅವನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 61/2026 ರಂತೆ NDPS ಕಾಯ್ದೆ 1985 ರ ಕಲಂ 8(C), 22(C) ಹಾಗೂ ಆರ್ಮ್ಸ್ ಆಕ್ಟ್ ಕಲಂ 27ರಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.


























