2025ರ ಕುಂಭಮೇಳದ ಸಮಯದಲ್ಲಿ ತನ್ನ ಸೌಂದರ್ಯದಿಂದಲೇ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಭೋಸ್ಲೆ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬುಧವಾರ (ಮಾರ್ಚ್ 11) ಸಂಜೆ ಕೇರಳದ ತಿರುವನಂತಪುರಂ ಸಮೀಪದ ದೇವಸ್ಥಾನವೊಂದರಲ್ಲಿ ನಟ ಮೊಹಮ್ಮದ್ ಫರ್ಮಾನ್ ಅವರೊಂದಿಗೆ ಮೊನಾಲಿಸಾ ವಿವಾಹ ನೆರವೇರಿದೆ.
ಮೊನಾಲಿಸಾ ಮತ್ತು ಮೊಹಮ್ಮದ್ ಫರ್ಮಾನ್ ಅವರದ್ದು ಅಂತರ್ ಧರ್ಮೀಯ ವಿವಾಹವಾಗಿದ್ದು, ಮನೆಯವರ ವಿರೋಧದ ನಡುವೆ ಅವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ.
ತಿರುವನಂತಪುರಂನ ಅರುಮನೂರಿನಲ್ಲಿರುವ ಮಂದಿರದಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಸ್ಥಳೀಯ ನಿವಾಸಿಗಳು ಮತ್ತು ರಾಜಕೀಯ ನಾಯಕರು ಭಾಗವಹಿಸಿದ್ದರು. ಅರ್ಚಕರು ನೀಡಿದ ತಾಳಿಯನ್ನು ಕಟ್ಟಿ, ಕುಂಕುಮವನ್ನು ಇಡುವ ಮೂಲಕ ಫರ್ಮಾನ್ ಅವರು ಮೊನಾಲಿಸಾ ಅವರನ್ನು ವರಿಸಿದರು. ಮದುವೆಯ ನಂತರ ಮಾತನಾಡಿದ ಈ ಜೋಡಿ, ‘ನಮಗೆ ಕೇರಳ ಎಂದರೆ ತುಂಬಾ ಇಷ್ಟ. ಇಲ್ಲಿನ ಸುರಕ್ಷತೆ ಮತ್ತು ಪರಿಸರ ಕಂಡು ನಾವು ಇಲ್ಲಿಯೇ ಮದುವೆಯಾಗಲು ನಿರ್ಧರಿಸಿದೆವು’ ಎಂದು ಹೇಳಿದ್ದಾರೆ.
ಮೊನಾಲಿಸಾ ಅವರು ಇಂದೋರ್ ಮೂಲದವರು. ಮೊಹಮ್ಮದ್ ಫರ್ಮಾನ್ ಮಹಾರಾಷ್ಟ್ರದವರು. ಇವರಿಬ್ಬರೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ಆರು ತಿಂಗಳ ಹಿಂದೆ ಚಿತ್ರೀಕರಣದ ವೇಳೆಯಲ್ಲಿ ಭೇಟಿಯಾಗಿದ್ದರು. ‘ನಾನು ಮೊನಾಲಿಸಾಳನ್ನು ಚಿತ್ರೀಕರಣದ ಸೆಟ್‌ನಲ್ಲಿ ಭೇಟಿಯಾದೆ. ಆರು ತಿಂಗಳಿನಿಂದ ನಮ್ಮ ಪ್ರೀತಿ ಬೆಳೆದಿದೆ. ಈ ಆರು ತಿಂಗಳು ನಮಗೆ 60 ವರ್ಷಗಳ ಸುದೀರ್ಘ ಬಾಂಧವ್ಯದಂತೆ ಭಾಸವಾಗುತ್ತಿದೆ’ ಎಂದು ಫರ್ಮಾನ್ ಹೇಳಿದ್ದಾರೆ.
ಸಿನಿಮಾ ಚಿತ್ರೀಕರಣಕ್ಕಾಗಿ ಕೇರಳಕ್ಕೆ ಬಂದಿದ್ದ ಈ ಜೋಡಿ, ಇಲ್ಲಿನ ಸಂಸ್ಕೃತಿಗೆ ಮಾರುಹೋಗಿದ್ದಾರೆ. ‘ಕೇರಳದ ಸೌಂದರ್ಯ ಮತ್ತು ಅಲ್ಲಿನ ಜನರ ಗುಣ ನಮಗೆ ತುಂಬಾ ಇಷ್ಟವಾಯಿತು. ಬೇರೆ ರಾಜ್ಯಗಳಲ್ಲಿ ನಮ್ಮ ಸಂಬಂಧಕ್ಕೆ ವಿರೋಧ ವ್ಯಕ್ತವಾಗುವ ಆತಂಕವಿತ್ತು. ಆದ್ದರಿಂದ ಸುರಕ್ಷಿತ ಎನಿಸಿದ ಕೇರಳದ ದೇವಸ್ಥಾನದಲ್ಲಿ ಮದುವೆಯಾಗಲು ಸಮಿತಿಯ ಅನುಮತಿ ಪಡೆದೆವು’ ಎಂದು ಫರ್ಮಾನ್ ತಿಳಿಸಿದ್ದಾರೆ. ಫರ್ಮಾನ್ ಅವರ ತಂದೆ ಈ ಸಂಬಂಧಕ್ಕೆ ಇನ್ನು ಸಂಪೂರ್ಣ ಸಮ್ಮತಿ ನೀಡಿಲ್ಲ ಎಂಬ ವಿಷಯವನ್ನೂ ಅವರು ಹಂಚಿಕೊಂಡಿದ್ದಾರೆ.
ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು. ಹೊರರಾಜ್ಯದ ಕಲಾವಿದರು ಕೇರಳಕ್ಕೆ ಬಂದು ಅಲ್ಲಿನ ಸಂಪ್ರದಾಯದಂತೆ ಮದುವೆ ಆಗಿರುವುದು ವಿಶೇಷವಾಗಿದೆ. ಮದುವೆ ಬಳಿಕ ತಮಗೆ ರಕ್ಷಣೆ ಬೇಕು ಎಂದು ಫರ್ಮಾನ್ ಮತ್ತು ಮೊನಾಲಿಸಾ ಅವರು ಕೇರಳ ಪೊಲೀಸರ ಮೊರೆ ಹೋಗಿದ್ದಾರೆ.


























