ನೆಲ್ಯಾಡಿ: ಗೂಡ್ಸ್ ಟೆಂಪೋವೊಂದರಲ್ಲಿ ಹಿಂಸಾತ್ಮಕವಾಗಿ ಹೋರಿಗಳ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಗುಂಡ್ಯದಲ್ಲಿ ಪತ್ತೆ ಹಚ್ಚಿದ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿ ಹೋರಿ ಹಾಗೂ ಟೆಂಪೋ ವಶಪಡಿಸಿಕೊಂಡ ಘಟನೆ ಮಾ.11ರಂದು ನಡೆದಿದೆ.
ಹಾಸನ ಜಿಲ್ಲೆ ಅರಸಿಕೆರೆ ನಿವಾಸಿ ಕುಮಾರ್ (48ವ.) ಬಂಧಿತ ಆರೋಪಿ. ಮಾ.11ರಂದು ಮುಂಜಾನೆ ಗುಂಡ್ಯ ಚೆಕ್ ಪೋಸ್ಟ್ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ವಾಹನ ತಪಾಸಣೆ ಮಾಡುತ್ತಿದ್ದಾಗ ಹಾಸನ ಕಡೆಯಿಂದ ಬರುತ್ತಿದ್ದ ಗೂಡ್ಸ್ ಟೆಂಪೋ (ಕೆಎ 13, ಎಎ 2177) ನಿಲ್ಲಿಸಿ ತಪಾಸಣೆ ಮಾಡುತ್ತಿದ್ದಾಗ ಟೆಂಪೋದಲ್ಲಿ ಜಾನುವಾರು ಇರುವುದಾಗಿ ಆರೋಪಿ ಕುಮಾರ್ ತಿಳಿಸಿದ್ದು, ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೇ ಹಾಸನದಿಂದ ಕೇರಳ ರಾಜ್ಯದ ಕಾಸರಗೋಡಿಗೆ ಮಾಂಸ ಮಾಡುವ ಉದ್ದೇಶದಿಂದ ಸಾಗಾಟ ಮಾಡುವುದಾಗಿ ತಿಳಿಸಿದ್ದಾನೆ.
ನಂತರ ಪಂಚರ ಸಮಕ್ಷಮ ಟರ್ಪಲ್ ಬಿಚ್ಚಿನೋಡಿದಾಗ 4 ಹೋರಿಗಳನ್ನು ಟೆಂಪೋದ ಒಳಗೆ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಕುಮಾರ್‌ನನ್ನು ಬಂಧಿಸಿ, ಟೆಂಪೋದಲ್ಲಿದ್ದ ಅಂದಾಜು 2 ಲಕ್ಷರೂ.ಮೌಲ್ಯದ 4 ಹೋರಿ ಹಾಗೂ 8 ಲಕ್ಷ ರೂ. ಮೌಲ್ಯದ ಟೆಂಪೋ ವಶಪಡಿಸಿಕೊಂಡಿದ್ದಾರೆ.

























