ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ತೋಟಕ್ಕೆ ಮೇಯಲು ಬಂದ ಜಾನುವಾರುಗಳನ್ನು ಓಡಿಸಲು ಹೋದ ವೇಳೆ ಆಕಸ್ಮಿಕವಾಗಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಕೊಣಾಲು ಗ್ರಾಮದ ಪಾತೃಮಾಡಿ ನಿವಾಸಿ ಲೀಲಾವತಿ ಶೆಟ್ಟಿ (64) ಎಂದು ಗುರುತಿಸಲಾಗಿದೆ. ಮಾ. 11ರಂದು ಸಂಜೆ ತಮ್ಮ ತೋಟಕ್ಕೆ ಬಂದ ಜಾನುವಾರುಗಳನ್ನು ಓಡಿಸಲು ಹೋಗಿದ್ದ ವೇಳೆ ಅವರು ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಲೀಲಾವತಿ ಅವರ ಪುತ್ರ ಹರೀಶ್ ಲಾರಿ ಚಾಲಕರಾಗಿದ್ದು, ಮಾ. 11ರಂದು ರಾತ್ರಿ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿದ್ದು ತಾಯಿ ಮನೆಯಲ್ಲಿ ಕಾಣಿಸಲಿಲ್ಲ. ಬಳಿಕ ನೆರೆಹೊರೆಯವರೊಂದಿಗೆ ಹುಡುಕಾಟ ನಡೆಸಿದಾಗ ತಮ್ಮ ತೋಟದಲ್ಲಿ ಲೀಲಾವತಿ ಅವರು ಬಿದ್ದು ಮೃತಪಟ್ಟಿರುವುದು ಪತ್ತೆಯಾಯಿತು.
ಲೀಲಾವತಿ ಅವರ ಒಂದು ಕೈಯಲ್ಲಿ ಕಲ್ಲು ಮತ್ತು ಇನ್ನೊಂದು ಕೈಯಲ್ಲಿ ದೊಣ್ಣೆ ಇದ್ದುದರಿಂದ, ಜಾನುವಾರುಗಳನ್ನು ಓಡಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿದ್ದು ಕೈಯಲ್ಲಿದ್ದ ಕಲ್ಲು ಹಣೆಗೆ ತಾಗಿ ಗಂಭೀರ ಗಾಯಗೊಂಡು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

























