ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಶೆಟ್ಟಿಕೋಡಿ ಪ್ರದೇಶದಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ ಘಟನೆ ಶುಕ್ರವಾರ (ಮಾರ್ಚ್ 13) ಮಧ್ಯಾಹ್ನ ನಡೆದಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿಯಾದ ಅನನ್ಯ ಶ್ರೀವತ್ಸವ್ (ಐಪಿಎಸ್) ಅವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಮಧ್ಯಾಹ್ನ ಸುಮಾರು 1.30ರ ವೇಳೆಗೆ ಶೆಟ್ಟಿಕೋಡಿ ಪ್ರದೇಶದಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆಯಿತು. ಮಾಹಿತಿ ಆಧಾರದಲ್ಲಿ ಕರಾಯ–ಗುರುವಾಯನಕೆರೆ ರಸ್ತೆಯಿಂದ ಸುಮಾರು 400 ಮೀಟರ್ ಒಳಗಡೆ ಇರುವ ಮೈದಾನಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಹಲವರು ಸೇರಿಕೊಂಡು ಕೋಳಿಗಳ ಕಾಲಿಗೆ ಬಾಳು ಕಟ್ಟಿ ಹಿಂಸಾತ್ಮಕವಾಗಿ ಕಾದಾಟ ನಡೆಸುತ್ತಿರುವುದು ಕಂಡುಬಂದಿತು.
ಪೊಲೀಸರು ದಾಳಿ ನಡೆಸುತ್ತಿದ್ದಂತೆ ಅಲ್ಲಿ ಸೇರಿದ್ದ ಜನರು ಓಡಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಐವರನ್ನು ಹಿಡಿದು ವಶಕ್ಕೆ ಪಡೆದುಕೊಂಡರು.
ಬಂಧಿತರನ್ನು ಅಂಕಿತ್ (23), ಯಶೋಧರ (32), ಶಿವಪ್ಪ (45), ಕರುಣಾಕರ ಪೂಜಾರಿ (25) ಮತ್ತು ಉಮೇಶ್ (42) ಎಂದು ಗುರುತಿಸಲಾಗಿದೆ.
ಸ್ಥಳದಿಂದ ನಾಲ್ಕು ಕೋಳಿಗಳು, ಜೂಜಾಟಕ್ಕೆ ಬಳಸಿದ ರೂ.2,500 ನಗದು, ನಾಲ್ಕು ನೈಲಾನ್ ಚೀಲಗಳು, ಒಂದು ನೀಲಿ ಟರ್ಪಲ್, ಒಂದು ಗೋಣಿಚೀಲ, ಎರಡು ಕೋಳಿ ಬಾಳುಗಳು ಹಾಗೂ ಕೆಎ-21-ಬಿ-5558 ಸಂಖ್ಯೆಯ ಆಟೋ ರಿಕ್ಷಾ ಸೇರಿದಂತೆ ಒಟ್ಟು ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 37/2026 ದಾಖಲಿಸಲಾಗಿದ್ದು, ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 87, 93 ಹಾಗೂ ಪ್ರಾಣಿ ಹಿಂಸೆ ನಿಷೇಧ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

























