ಕಡಬ, ಮಾ.15: ಐರ್ಲೆಂಡ್‌ನಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ ಕುಟ್ರುಪ್ಪಾಡಿ ನಿವಾಸಿ ಸಾಂಜೋ ಸುನಿಲ್ ಅವರ ಸಾವಿನ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಭಾನುವಾರ ಕಡಬದಲ್ಲಿ ಸಾವಿರಾರು ಜನರು ಮೌನ ಕ್ಯಾಂಡಲ್ ಮೆರವಣಿಗೆ ನಡೆಸಿದರು.
ಕಡಬ ಕ್ರಿಶ್ಚಿಯನ್ ಲೈಟ್ನಿಂಗ್ ಕ್ಲಬ್ ಮತ್ತು ಮಲಯಾಳಿ ಫ್ರೆಂಡ್ಸ್ ಸಂಘಟನೆಗಳ ನೇತೃತ್ವದಲ್ಲಿ ಅನುಗ್ರಹ ಸಭಾಭವನದಿಂದ ಸೈಂಟ್ ಜೋಕಿಮ್ಸ್ ವಾಣಿಜ್ಯ ಕಟ್ಟಡದವರೆಗೆ ಮೆರವಣಿಗೆ ನಡೆಯಿತು. ಪ್ರತಿಭಟನಾಕಾರರು ಸಾಂಜೋ ಅವರ ಸಾವಿನ ಸತ್ಯಾಸತ್ಯತೆ ಬಹಿರಂಗವಾಗಬೇಕೆಂದು ಒತ್ತಾಯಿಸಿದರು.
ಸಾಂಜೋ ಸುನಿಲ್ ಅವರು ಮದುವೆಯಾದ ಕೆಲವೇ ತಿಂಗಳಲ್ಲಿ ಪತ್ನಿ ಲಿಷ್ಮಾ ಫಿಲಿಪ್ ಅವರ ಡಿಪೆಂಡೆಂಟ್ ವೀಸಾದ ಮೂಲಕ ಐರ್ಲೆಂಡ್‌ಗೆ ತೆರಳಿದ್ದು, ಅಲ್ಲಿ ಕೇವಲ 28 ದಿನಗಳಲ್ಲೇ ಅವರ ಮೃತದೇಹ ಸಂಶಯಾಸ್ಪದ ಪರಿಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಸ್ಥಳೀಯ ಮುಖಂಡರು ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಸಾರ್ವಜನಿಕರಲ್ಲಿ ಮೂಡಿರುವ ಅನುಮಾನಗಳಿಗೆ ತೆರೆ ಎಳೆಯಬೇಕೆಂದು ಆಗ್ರಹಿಸಿದರು. ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ಸಾಂಜೋ ಸುನಿಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

























