ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ವಿದ್ಯುತ್ ಕಂಬವನ್ನು ಮೇಲಕ್ಕೆ ಎತ್ತುವ ವೇಳೆ ನಿಯಂತ್ರಣ ತಪ್ಪಿದ ಕಂಬ ತಲೆಗೆ ಬಡಿದ ಪರಿಣಾಮ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಸೋಮವಾರ (ಮಾ.16) ಸಂಜೆ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಕೊಕ್ಕಡ ಗ್ರಾಮದ ಮಹಾವೀರ ಕಾಲೋನಿ ನಿವಾಸಿ ಶಿವಪ್ಪ (37) ಎಂದು ಗುರುತಿಸಲಾಗಿದೆ. ಹಲವು ವರ್ಷಗಳಿಂದ ಅವರು ವಿದ್ಯುತ್ ಲೈನ್ ಕಂಬಗಳ ಅಳವಡಿಕೆ ಸೇರಿದಂತೆ ಸಂಬಂಧಿತ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಸ್ಥಳೀಯವಾಗಿ ಕಾರ್ಮಿಕರೊಂದಿಗೆ ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದರು.
ಸೋಮವಾರ ಬೆಳಗ್ಗೆ ಎಂದಿನಂತೆ ಧರ್ಮಸ್ಥಳ ಸಮೀಪದ ಪ್ರದೇಶದಲ್ಲಿ ವಿದ್ಯುತ್ ಕಂಬ ಅಳವಡಿಸುವ ಕೆಲಸದಲ್ಲಿ ಶಿವಪ್ಪ ನಿರತರಾಗಿದ್ದರು. ಸಂಜೆ ವೇಳೆಗೆ ಕೊಕ್ಕಡದ ಭಜನಾ ಮಂದಿರದ ಸಮೀಪ ಹಳೆಯ ವಿದ್ಯುತ್ ಕಂಬವನ್ನು ಮೇಲಕ್ಕೆ ಎತ್ತುವ ಕಾರ್ಯ ನಡೆಯುತ್ತಿದ್ದ ವೇಳೆ ಏಕಾಏಕಿ ಕಂಬ ನಿಯಂತ್ರಣ ತಪ್ಪಿ ಶಿವಪ್ಪ ಅವರ ತಲೆಗೆ ಬಡಿದಿದೆ. ಪರಿಣಾಮವಾಗಿ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ನಂತರ ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ.

























