ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಹೊಸಮಜಲು ನಿವಾಸಿಯೊಬ್ಬರು ಉಡುಪಿ ನಗರದ ಹಳೆ ಸರಕಾರಿ ಬಸ್ಸು ನಿಲ್ದಾಣ ಸಮೀಪದ ವಸತಿ ಗೃಹದ ಬಾಡಿಗೆ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.15ರಂದು ನಡೆದಿದೆ.
ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಹೊಸಮಜಲು ಗುಡ್ಡೆ ನಿವಾಸಿ ಮಥಾಯಿ ಅವರ ಪುತ್ರ ಜಿನ್ಸನ್ ಪಿ.ಎಂ.(38) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.
ಜಿನ್ಸನ್ ಅವರು ಮಂಗಳೂರು ಬರ್ಕೆಯ ಕೋಸ್ಟಲ್‌ಗಾರ್ಡ್‌ನಲ್ಲಿ ಕೆಲಸ ಮಾಡಿಕೊಂಡಿದ್ದು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಅಲ್ಲೇ ವಾಸ್ತವ್ಯವಿದ್ದರು. ಮಾ.14ರಂದು ಮಧ್ಯಾಹ್ನ ಮಂಗಳೂರಿನ ಮನೆಯಿಂದ ಹೋದವರು 3 ಗಂಟೆ ವೇಳೆಗೆ ಪತ್ನಿಗೆ ಹಾಗೂ ಸಂಜೆ 6 ಗಂಟೆ ವೇಳೆಗೆ ತಾಯಿಗೆ ಫೋನ್ ಮಾಡಿ ಆರೋಗ್ಯ ವಿಚಾರಿಸಿದ್ದರು.
ಉಡುಪಿಗೆ ತೆರಳಿದ್ದ ಜಿನ್ಸನ್ ಪಿ.ಎಂ.ಅವರು ಉಡುಪಿ ನಗರದ ಹಳೆ ಸರಕಾರಿ ಬಸ್ಸು ನಿಲ್ದಾಣದ ಸಮೀಪದ ವಸತಿ ಗೃಹದಲ್ಲಿ ಕೊಠಡಿ ಬಾಡಿಗೆ ಪಡೆದುಕೊಂಡಿದ್ದರು.
ಮಾ.15ರಂದು ಮಧ್ಯಾಹ್ನವಾದರೂ ವಸತಿಗೃಹದ ಕೊಠಡಿ ಬಾಗಿಲು ತೆರೆಯದೇ ಇದ್ದ ಹಿನ್ನೆಲೆಯಲ್ಲಿ ರೂಮ್‌ಬಾಯ್ ಪರಿಶೀಲನೆ ನಡೆಸಿದಾಗ ಜಿನ್ಸನ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.
ಬಳಿಕ ಜಿನ್ಸನ್ ಅವರ ಮೊಬೈಲ್ ನಲ್ಲಿದ್ದ ಅವರ ತಾಯಿಯ ಫೋನ್ ನಂಬರ್ ಗೆ ಕರೆ ಮಾಡಿ ಉಡುಪಿ ಪೊಲೀಸರು ಘಟನೆ ಕುರಿತು ಮಾಹಿತಿ ನೀಡಿದ್ದರು. ಉಡುಪಿ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಭರತೇಶ್, ಎಸ್‌ಐ ನಾರಾಯಣ, ಎಎಸ್‌ಐ ವಿಜಯ್ ಅವರು ಘಟನಾ ಸ್ಥಳಕ್ಕೆ ತೆರಳಿ ಮಹಜರು ಪ್ರಕ್ರಿಯೆ ನಡೆಸಿದರು.
ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಶವವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ನೆರವಾದರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಪೊಲೀಸರು ಕುಟುಂಬಸ್ಥರಿಗೆ ಬಿಟ್ಟುಕೊಟ್ಟಿದ್ದು ಮಾ.16ರಂದು ನೆಲ್ಯಾಡಿಯ ಮನೆಗೆ ತಂದು ನೆಲ್ಯಾಡಿ ಚರ್ಚ್‌ನಲ್ಲಿ ಅಂತಿಮ ಸಂಸ್ಕಾರ ಮಾಡಲಾಗಿದೆ.
ವೈಯಕ್ತಿಕ ಕಾರಣದಿಂದ ಜಿನ್ಸನ್ ಪಿ.ಎಂ.ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ದಾಖಲಾಗಿದೆ. ಮೃತರು ತಂದೆ ಮಥಾಯಿ, ತಾಯಿ ಎಲಿಯಮ್ಮ, ಪತ್ನಿ ಮರಿಯ, ಮಕ್ಕಳಾದ ಜೋವನ್, ಫ್ರಾನ್ಸ್, ಸಹೋದರರಾದ ಜಿನು, ಜಿಜು ಅವರನ್ನು ಅಗಲಿದ್ದಾರೆ.

























