ಪುತ್ತೂರು: ಮಹಿಳೆಯೊಬ್ಬರಿಂದ ಮೋಸದಿಂದ ಹಣ ಪಡೆದು ವಂಚನೆ ಮಾಡಿದ ಘಟನೆ ಆರ್ಯಾಪು ಗ್ರಾಮದ ಪರ್ಲಡ್ಕದ ಗೋಳಿಕಟ್ಟೆಯಲ್ಲಿ ನಡೆದಿರುವ ಕುರಿತು ವರದಿಯಾಗಿದೆ.
ಗೋಳಿಕಟ್ಟೆ ನಿವಾಸಿ ಶಬೀನ್ ತಾಜ್ ಎಂಬವರು ಹಣ ನೀಡಿ ವಂಚನೆಗೊಳಗಾದವರು.”ಎರಡು ವರ್ಷಗಳ ಹಿಂದೆ ಬೆಂಗಳೂರಿನ ಹೊಸಕೋಟೆಯ ಸಲ್ಮಾನ್ ಖಾನ್ ಎಂಬವರ ಪರಿಚಯ ಆಗಿತ್ತು. ಸುಮಾರು 20 ದಿನಗಳ ಹಿಂದೆ ಸಲ್ಮಾನ್ ಖಾನ್ ಮನೆಗೆ ಬಂದಿದ್ದಾರೆ. ಬಂದು ನನ್ನ ಮೊಬೈಲ್ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ.
ಮಾ.3ರಂದು ಇನ್‌ಸ್ಟಾ ಗ್ರಾಮ್‌ನ ಮ್ಯಾಟ್ರಿಮೊನಿ ಮೂಲಕ ಪರಿಚಯವಾದ ಸರ್ಜಿಲ್ ಖಾನ್ ಯಾನೆ ರಾಜೀರ್ ಎಂಬ ಅಪರಿಚಿತ ವ್ಯಕ್ತಿ ಹೆಸರಿನಲ್ಲಿ ವಾಟ್ಸಪ್ ಕರೆ ಮಾಡಿ, ವಿದೇಶದಿಂದ ಸಾಮಾಗ್ರಿಗಳನ್ನು ತರುವಾಗ ಮುಂಬೈ ಏರ್‌ಪೋರ್ಟ್‌ನಲ್ಲಿ ಕಸ್ಟಮ್ ಇಲಾಖೆಯಲ್ಲಿ ಸಿಕ್ಕಿ ಬಿದ್ದಿರುವುದಾಗಿ ತಿಳಿಸಿ, ಅಲ್ಲಿಂದ ಬಿಡಿಸಿಕೊಳ್ಳಲು ತುಂಬಾ ಹಣ ಬೇಕಾಗಿದೆ ಎಂದು ತನ್ನನ್ನು ನಂಬಿಸಿ ಮಾ.4ರಿಂದ ಮಾ.13ರ ತನಕ ಎಸ್‌ಬಿಐ, ಫೋನ್ ಪೇ, ಆ್ಯಕ್ಸಿಸ್ ಬ್ಯಾಂಕ್ ಮೂಲಕ ಸುಮಾರು 20 ಬಾರಿ ಒಟ್ಟು ರೂ.15,91,000 ಹಣವನ್ನು ಮೋಸದಿಂದ ಪಡೆದು ವಂಚನೆ ಮಾಡಿದ್ದಾರೆ” ಎಂದು ಆರೋಪಿಸಿ ಶಬೀನ್ ತಾಜ್ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


























