ಕಡಬ: ತಲೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದ 10 ವರ್ಷದ ಬಾಲಕನು ಮನೆಯಲ್ಲಿದ್ದ ಔಷಧಿಯನ್ನು ಸೇವಿಸಿದ ಪರಿಣಾಮ ದುರ್ಘಟನೆ ಸಂಭವಿಸಿ ಮೃತಪಟ್ಟ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ನಡೆದಿದೆ.
ಈ ಕುರಿತು ಸಂಜೀವ ಪೂಜಾರಿ (50) ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರ 10 ವರ್ಷದ ಮಗನಿಗೆ ಪದೇಪದೇ ತಲೆನೋವು ಕಾಣಿಸಿಕೊಂಡಿದ್ದು, ಮಾರ್ಚ್ 18ರ ಸಂಜೆ ತಲೆನೋವಿನ ಕಾರಣಕ್ಕೆ ಮನೆಯಲ್ಲಿದ್ದ ಔಷಧಿಯನ್ನು ಸೇವಿಸಿದ್ದಾನೆ. ಬಳಿಕ ಬಾಲಕನು ಮನೆಯಲ್ಲಿ ಅಸ್ವಸ್ಥವಾಗಿ ಹೊರಳಾಡುತ್ತಿರುವುದಾಗಿ ತಾಯಿಯವರು ತಿಳಿಸಿದ ಮೇರೆಗೆ ಸಂಜೀವ ಪೂಜಾರಿ ಅವರು ತಕ್ಷಣ ಮನೆಗೆ ಆಗಮಿಸಿ ಮಗನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿಸಿದ್ದಾರೆ.
ನಂತರ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯರು ಪರಿಶೀಲಿಸಿದಾಗ ಬಾಲಕನು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 10/2026ರಂತೆ ಕಲಂ 194 BNSS-2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
























